ಕೊರೊನಾ ಮೇಲೆ ನಿಗಾ ಇಡಿ ಡಬ್ಲ್ಯುಎಚ್‌ಒ

ಜಿನೇವಾ, ಡಿ.೨೫- ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರ ತಳಿಗಳು ಹೆಚ್ಚುತ್ತಿದ್ದು ಆತಂಕ ಮೂಡಿಸಿರುವ ಬೆನ್ನಲ್ಲೇ ಕೊರೊನಾ ಸೋಂಕು ಪ್ರಕರಣಗಳ ಮೇಲೆ ನಿಗಾ ಇಡುವಂತೆ ಎಲ್ಲಾ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೊರೊನಾ ಸೋಂಕಿನ ಹೊಸ ರೂಪಾಂತರಿ ಜೆಎನ್.೧ ಮತ್ತು ಇನ್‌ಫ್ಲುಯೆನ್ಜಾ ಸೇರಿದಂತೆ ಉಸಿರಾಟ ಸಮಸ್ಯೆಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನು ಖಾತರಿ ಪಡಿಸಿಕೊಳ್ಳುವುದು ಎಲ್ಲಾ ದೇಶಗಳ ಕರ್ತವ್ಯ ಎಂದು ಸಲಹೆ ನೀಡಿದೆ.
ಜಗತ್ತಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡು ಅದರ ರುದ್ರನರ್ತನ ತೋರಿರುವ ಹಿನ್ನೆಲೆಯಲ್ಲಿ ಸೋಂಕು ಉಲ್ಬಣವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಎಲ್ಲಾ ದೇಶಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೇರಳದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ನಂತರ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳಲ್ಲಿ ತ್ವರಿತಗತಿಯಲ್ಲಿ ಏರಿಕೆ ಕಂಡುಬಂದಿದೆ. ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡುವಂತೆ ಸೂಚನೆ ನೀಡಿದೆ.
ದೇಶದಲ್ಲಿ ೪ ಸಾವಿರ ಗಡಿ ದಾಟಿದ ಪ್ರಕರಣ:
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಉಪ ತಳಿ ಜೆಎನ್.೧ ಹೆಚ್ಚಾಗುತ್ತಿರುವ ನಡುವೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ ೪ ಸಾವಿರ ಗಡಿ ದಾಟಿರುವುದು ಕೇಂದ್ರ ಮತ್ತು ಕೋವಿಡ್ ಬಾಧಿತ ರಾಜ್ಯಗಳಲ್ಲಿ ಮತ್ತುಷ್ಟು ಆತಂಕ ಹೆಚ್ಚಿಸಿದೆ.
ದೇಶದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ೪,೦೫೪ ಕ್ಕೆ ಏರಿದೆ, ಕೇರಳದಲ್ಲಿ ಒಂದು ಸಾವು ಕೂಡ ವರದಿಯಾಗಿದೆ. ದಾಖಲಾಗಿದೆ. ಮಹರಾಷ್ಟ್ರದ ಥಾಣೆಯಲ್ಲಿ ಜೆಎನ್.೧ ಸೋಂಕು ಹೆಚ್ಚುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ನಿನ್ನೆ ಸಕ್ರಿಯ ಪ್ರಕರಣಗಳು ೩,೭೪೨ ಮಂದಿಯಲ್ಲಿ ಇದ್ದವು. ಇಂದು ಬೆಳಗ್ಗೆ ೮ ಗಂಟೆಗೆ ಈ ಸಂಖ್ಯೆ ೪,೦೫೪ಕ್ಕೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.
ಕೋವಿಡ್ ಸೋಂಕಿನ ಉಪ ತಳಿ ಜೆ ಎನ್.೧ ಮೊದಲು ಕೇರಳದಲ್ಲಿ ಕಾಣಿಸಿಕೊಂಡು ನಂತರ ಕರ್ನಾಟಕ, ತಮಿಳುನಾಡು, ಮಹರಾಷ್ಟ್ರ ಸೇರಿದಂತೆ ದೇಶದ ೬ ರಾಜ್ಯಗಳಲ್ಲಿ ಸೋಂಕು ನಿತ್ಯ ಹೆಚ್ಚಾಗುತ್ತಿದೆ. ಕೇರಳದಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಬ್ಬರು ಸಾವನ್ನಪ್ಪಿದ್ದು ಇಲ್ಲಿಯ ತನಕ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ೫,೩೩,೩೩೪ ಕ್ಕೆ ಏರಿಕೆಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ, ೩೧೫ ಜನರು ಕೋವಿಡ್ -೧೯ ನಿಂದ ಚೇತರಿಸಿಕೊಂಡಿದ್ದಾರೆ, ಒಟ್ಟು ಚೇತರಿಸಿಕೊಂಡವರ ಸಂಖ್ಯೆ ೪,೪೪,೭೧,೮೬೦ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಸೋಂಕಿನ ಚೇತರಿಕೆ ಪ್ರಮಾಣ ೯೮.೮೧ ಪ್ರತಿಶತದಷ್ಟು ದಾಖಲಾಗಿದ್ದರೆ, ಪ್ರಕರಣದ ಸಾವಿನ ಪ್ರಮಾಣ ಶೇಕಡಾ ೧.೧೮ ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಮಹಾರಾಷ್ಟ್ರದ ಥಾಣೆ ನವೆಂಬರ್ ೩೦ ರಿಂದ ಪರೀಕ್ಷಿಸಲಾದ ೨೦ ಮಾದರಿಗಳಲ್ಲಿ ಜೆಎನ್.೧ ರ ಐದು ಪ್ರಕರಣ ಧೃಡಪಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೆಎನ್.೧ ರೂಪಾಂತರದ ಸೋಂಕಿತ ರೋಗಿಗಳಲ್ಲಿ ಒಬ್ಬ ಮಹಿಳೆ ಸೇರಿದ್ದಾರೆ ಮತ್ತು ಅವರಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ನಗರದಲ್ಲಿ ಸಕ್ರಿಯ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ೨೮. ಅವರಲ್ಲಿ ಇಬ್ಬರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ತಮ್ಮ ಮನೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ೧೦೬ ಪ್ರಕರಣ ಪತ್ತೆ
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹೊತ್ತಲ್ಲೇ ಕೊರೊನಾ ವೈರಸ್ ಮತ್ತೆ ಭೀತಿ ಹುಟ್ಟಿಸಿದೆ. ಕರ್ನಾಟಕದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೦೬ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದು ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೪೪ ಕ್ಕೆ ಏರಿಕೆಯಾಗಿದೆ. ಪಾಸಿಟಿವಿ ರೇಟ್ ಕೂಡ ಏರಿಕೆಯಾಗಿದೆ.
ಹೋಂ ಐಸೋಲೇಷನ್ ಕಡ್ಡಾಯಗೊಳಿಸುವುದು, ಕ್ವಾರಂಟೈನ್ ಆದವರ ಮೇಲೆ ಹೆಚ್ಚು ನಿಗಾ ಇಡುವುದು, ಕೋವಿಡ್ ಟೆಸ್ಟ್ ಹೆಚ್ಚಳ, ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡುವುದು ಹಾಗೂ ಆಕ್ಸಿಜನ್, ವೆಂಟಿಲೇಟರ್ ಹಾಗೂ ವೈದ್ಯಕೀಯ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಲು ಮುಂದಾಗಿದೆ.