ಕೊರೊನಾ ಮೃತರ ಕುಟುಂಬಕ್ಕೆ ಪರಿಹಾರ

ನವದೆಹಲಿ, ಜೂ. ೩೦- ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಕಡ್ಡಾಯವಾಗಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಮೃತರ ಕುಟುಂಬಗಳಿಗೆ ಪರಿಹಾರವನ್ನು ಎಷ್ಟು ನೀಡಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸಬೇಕು. ಈ ಸಂಬಂಧ ೬ ವಾರಗಳೊಳಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಎನ್ ಡಿಎಂಎ ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದೂ ಕೂಡ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು ಕನಿಷ್ಟ ಮಾನದಂಡಗಳನ್ನು ಅನುಸರಿಸಿ ಎಂದು ಸೂಚನೆ ನೀಡಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಎಂ.ಆರ್. ಷಾ ರವರ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಈ ಸಂಬಂಧ ತೀರ್ಪು ನೀಡಿದ್ದು, ಎನ್‌ಡಿಎಂಎ ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವ ಸೂಚನೆಯನ್ನು ನೀಡಿದೆ.
ಜುಲೈ ೪ ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಎಷ್ಟು ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎನ್ನುವುದನ್ನು ನೀವೇ ನಿರ್ಧರಿಸಿ, ಆದರೆ ಪರಿಹಾರವನ್ನು ಕಡ್ಡಾಯವಾಗಿ ಕೊಡಲೇಬೇಕು ಎಂದು ಹೇಳಿದೆ.
ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳು ಯಾವತ್ತು ಮೃತಪಟ್ಟರು, ಯಾವ ಕಾರಣಕ್ಕಾಗಿ ಮೃತಪಟ್ಟರು ಎಂಬುದನ್ನು ಮರಣ ಪ್ರಮಾಣಪತ್ರದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದೆ.
ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ೪ ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ ಈ ಸೂಚನೆ ನೀಡಿದೆ.
ದೇಶದಲ್ಲಿ ಇದುವರೆಗೂ ೩.೮೫ ಲಕ್ಷ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇದಕ್ಕೂ ಮುನ್ನ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹಾಗೊಂದು ವೇಳೆ ಪರಿಹಾರ ನೀಡಿದರೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಲಿದೆ. ರಾಜ್ಯ ವಿಪತ್ತು ನಿಧಿ ಅಡಿ ಪರಿಹಾರ ನೀಡಲಾಗುತ್ತಿದೆ ಎಂದು ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ೧೮೩ ಪುಟಗಳ ಪ್ರಮಾಣಪತ್ರ ಸಲ್ಲಿಸಲಾಗಿತ್ತು.
ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡದಿರುವುದು ನ್ಯಾಯಸಮ್ಮತವಲ್ಲ. ಅಂತಹ ಕುಟುಂಬಗಳಿಗೆ ಎಷ್ಟು ಪರಿಹಾರ ನೀಡುತ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಿ. ಆದರೆ ಪರಿಹಾರವನ್ನು ಕೊಡಲೇಬೇಕು ಎಂದು ಸೂಚಿಸಿದೆ.
ರಾಜ್ಯ ವಿಪತ್ತು ನಿಧಿ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡಿದಿದ್ದರೆ, ಈ ರೀತಿ ಸಮಸ್ಯೆ ಆಗುತ್ತಿರಲಿಲ್ಲ. ರಾಜ್ಯ ವಿಪತ್ತು ನಿಧಿಯನ್ನು ಬಳಸಿಕೊಂಡು ಪರಿಹಾರ ನೀಡಿ ಎಂದೂ ಕೂಡ ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ಸೋಮವಾರ ಮುಂದೂಡಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಿ.

ಪರಿಹಾರದ ಮೊತ್ತವನ್ನು ಸರ್ಕಾರವೇ ನಿರ್ಧರಿಸಲು ಸೂಚನೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ನಿರ್ದೇಶನ.

ಕೇಂದ್ರ ಸರ್ಕಾರ ಪರಿಹಾರ ಕೊಡಲು ಅಸಾಧ್ಯ ಎಂದು ಪ್ರಮಾಣಪತ್ರ ಸಲ್ಲಿಕೆ.

೬ ವಾರಗಳಲ್ಲಿ ಮಾರ್ಗಸೂಚಿ ರಚಿಸುವಂತೆ ಸೂಚನೆ.

ಎನ್‌ಡಿಎಂಎಫ್ ಕರ್ತವ್ಯ ನಿರ್ವಹಣೆಯಲ್ಲಿ ವಿಫಲ.