ಕೊರೊನಾ ಮೃತದೇಹಗಳ ಸಂಸ್ಕಾರಕ್ಕೆ ಕಿಮ್ಸ್ ಮಾದರಿ


ಹುಬ್ಬಳ್ಳಿ, ಆ. ೨- ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳ ಬಳಿ ಸಂಬಂಧಿಗಳೇ ಬರುತ್ತಿಲ್ಲ. ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲು ಮೃತರ ಸಮುದಾಯದವರೇ ನಿರಾಕರಿಸುತ್ತಿರುವ ಸವಾಲುಗಳನ್ನು ಎದುರಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವ ನಿರ್ವಹಣಾ ತಂಡ ಕೊರೊನಾ ಮೃತದೇಹಗಳ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿದೆ.
ಮೃತರ ಆತ್ಮಕ್ಕೆ ಸದ್ಗತಿ ಕಲ್ಪಿಸುವ ಪುಣ್ಯದ ಕಾರ್ಯ ಮಾಡುತ್ತಿರುವ ಕಿಮ್ಸ್ ಆಸ್ಪತ್ರೆಯ ಶವ ನಿರ್ವಹಣಾ ತಂಡವು ಸಮಾಜಕ್ಕೆ ಮಾದರಿಯಾಗಿದೆ.
ಕೊರೊನಾ ಮಹಾಮಾರಿಯ ಹೊಡೆತಕ್ಕೆ ಧಾರವಾಡ ಜಿಲ್ಲೆಯ ಜನರು ಕಂಗೆಟ್ಟಿದ್ದಾರೆ. ಪ್ರತಿನಿತ್ಯ ಕೋವಿಡ್ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟುತ್ತಿದೆ. ಈಗಾಗಲೇ ಅವಳಿ ನಗರದ ೧೩೧ ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದು ಪ್ರತಿನಿತ್ಯ ಐದರಿಂದ ಎಂಟು ಮಂದಿ ಸಾವಿ ಗೀಡಾಗುತ್ತಿದ್ದಾರೆ. ಕೋವಿಡ್ ಸೋಂಕಿನಿಂದ ಬಲಿಯಾದವರ ಅಂತ್ಯಕ್ರಿಯೆಗೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಮಾಡಿದೆ.
ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರದ ವೇಳೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಮೃತದೇಹಗಳನ್ನು ಎಳೆದೊಯ್ಯುವುದು, ಬೇಕಾಬಿಟ್ಟಿ ಎಸೆಯುವುದು ನಡೆಯುತ್ತಿದೆ. ಅಂತಿಮ ವಿಧಿವಿಧಾನ ಗೌರವ ಪೂರ್ವಕವಾಗಿ ಮಾಡದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೃತರ ಅಂತ್ಯಕ್ರಿಯೆ ವೇಳೆ ಲೋಪವಾಗದಂತೆ ಕಾರ್ಯ ನಿರ್ವಹಿಸಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಶವ ನಿರ್ವಹಣಾ ತಂಡ ರಚಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಅಂತ್ಯಸಂಸ್ಕಾರವನ್ನು ಮಾಡಲು ಹನ್ನೆರಡು ಜನರ ತಂಡ ಕೆಲಸ ಮಾಡುತ್ತಿದೆ. ಕಿಮ್ಸ್‌ನ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಈ ತಂಡ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದೆ.
ವಿಧಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಸುನೀಲ್ ಬಿರಾದರ್ ನೇತೃತ್ವದಲ್ಲಿ ಪರಶುರಾಮ್ ಮಲ್ಯಾಳ, ಮೊಯಿನುದ್ದೀನ್ ಸೇರಿದಂತೆ ತಂಡದ ಸದಸ್ಯರು ಅಂತ್ಯ ಸಂಸ್ಕಾರವನ್ನು ಒಂದು ಸೇವೆ ಎಂದು ಪರಿಗಣಿಸಿ ಎಲ್ಲಿಯೂ ಲೋಪವಾಗದಂತೆ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಕೋವಿಡ್ ಮತ್ತು ಇತರೆ ಕಾರಣದಿಂದ ಮೃತಪಟ್ಟ ಸುಮಾರು ೨೩೦ ಜನರ ಅಂತ್ಯ ಸಂಸ್ಕಾರವನ್ನು ಈ ಕೊರೋನಾ ವಾರಿಯರ್‌ಗಳು ಮಾಡಿದ್ದಾರೆ.
ಮಡದಿ,ಮಕ್ಕಳು ಸೇರಿದಂತೆ ಕುಟುಂಬದಿಂದ ದೂರವಿದ್ದು, ಈ ತಂಡದ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಒಂದು ಬಾರಿ ಪಿಪಿಇ ಕಿಟ್ ಧರಿಸಿದರೆ ಅಂತ್ಯ ಸಂಸ್ಕಾರ ಮುಗಿಯುವವರೆಗೂ ತೆಗೆಯುವಂತಿಲ್ಲ. ನೀರು ಕುಡಿಯಲಾಗಲ್ಲ ಶೌಚಕ್ಕೆ ಹೋಗಲು ಸಾಧ್ಯವಿಲ್ಲ. ಮೃತರ ಕುಟುಂಬಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂತ್ಯಕ್ರಿಯೆ ಮಾಡುವುದು ಒಂದು ಸವಾಲು. ಕೆಲವರು ನೆಲದಲ್ಲಿ ಹೂಳಲು ಹೇಳುತ್ತಾರೆ. ಕೆಲವರು ಅಗ್ನಿಸ್ಪರ್ಶ ಮಾಡುವಂತೆ ತಿಳಿಸುತ್ತಾರೆ. ಮೃತರ ಕುಟುಂಬದ ಭಾವನೆಗೆ ಧಕ್ಕೆಯಾಗದಂತೆ ಅಂತ್ಯಕ್ರಿಯೆ ನಿಭಾಯಿಸಬೇಕಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ ಮೃತರ ಅಂತ್ಯ ಸಂಸ್ಕಾರಕ್ಕೆ ಒಂದೇ ಜಾಗ ನಿಗದಿಯಾಗಿಲ್ಲ. ಹೀಗಾಗಿ ಸಂಬಂಧಿಗಳ ಮನವಿಯಂತೆ ಆಯಾ ಊರುಗಳ ಸ್ಮಶಾನಕ್ಕೆ ತೆರಳಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.
ಮೃತದೇಹ ನೋಡಿ ಜನರು ದೂರ ಓಡುತ್ತಾರೆ. ಸಂಬಂಧಿಗಳು ಅಂತ್ಯ ಸಂಸ್ಕಾರಕ್ಕೆ ಬರಲ್ಲ. ಕೆಲವು ಸ್ಮಶಾನಗಳಲ್ಲಿ ಕೊರೋನಾಗೆ ಬಲಿಯಾದವರ ಅಂತ್ಯ ಸಂಸ್ಕಾರ ಮಾಡಲು ಅವರ ಸಮುದಾಯದವರೇ ಅವಕಾಶ ಕೊಡುತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಜನರಿಗೆ ತಿಳಿವಳಿಕೆ ಹೇಳಲು ಗಂಟೆಗಟ್ಟಲೇ ಸಮಯ ವ್ಯಯಿಸಬೇಕಾಗುತ್ತೆ. ಕೆಮಿಕಲ್ ಸಿಂಪಡಿಸಿ, ಪ್ಲಾಸ್ಟಿಕ್ ಬಳಸಿ ದೇಹವನ್ನು ಪ್ಯಾಕ್ ಮಾಡಲಾಗಿದೆ. ದೇಹವನ್ನು ಹೂಳುವುದರಿಂದ ಅಥವಾ ಸುಡುವುದರಿಂದ ರೋಗ ಹರಡಲ್ಲಾ ಎಂದು ಜನರ ಮನವೊಲಿಸಿ ಅಂತ್ಯ ಸಂಸ್ಕಾರ ಮಾಡುವ ಕೆಲಸವನ್ನು ಕಿಮ್ಸ್ ಆಸ್ಪತ್ರೆಯ ತಂಡ ಮಾಡುತ್ತಿದೆ.
ದೂರದ ಊರುಗಳಿಗೆ ಹೋಗಿ ಅಂತ್ಯಕ್ರಿಯೆ ಮಾಡುವವರೆಗೆ ಒಮ್ಮೊಮ್ಮೆ ಎಂಟರಿಂದ ಹತ್ತು ತಾಸುಗಳು ಆಗುತ್ತಿವೆ. ದಿನದ ಬಹುತೇಕ ಸಮಯ ಶವಾಗಾರದಲ್ಲಿರಬೇಕು. ಇಲ್ಲಾಂದ್ರೆ ಶವದ ಜೊತೆಗೆ ಆ?ಯಂಬ್ಯುಲೆನ್ಸ್‌ನಲ್ಲಿ ಇರಬೇಕಾಗುತ್ತೆ. ಶವ ನಿರ್ವಹಣಾ ತಂಡದ ಸದಸ್ಯರು ಪ್ರಾಣಭಯ ತೊರೆದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್?ನಿಂದ ಮೃತಪಟ್ಟವರ ದೇಹಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.