ಕೊರೊನಾ ಮೂರನೇ ಅಲೆ ಬಗ್ಗೆ ಎಚ್ಚರಿಕೆ ಅಗತ್ಯ

ಪುತ್ತೂರು, ಜೂ.೧೦- ಕೊರೊನಾದ ಎರಡನೇ ಅಲೆ ಪ್ರಭಾವ ನಿಯಂತ್ರಣಕ್ಕೆ ಬರುತ್ತಿದ್ದರೂ ನಾವು ಮೈ ಮರೆತು ಓಡಾಡುವ ಹಾಗಿಲ್ಲ. ಕೊರೊನಾ ಮೂರನೇ ಅಲೆಯ ಸಾಧ್ಯತೆ ಹೆಚ್ಚಾಗಿದ್ದು, ಜನತೆ ಸದಾ ಜಾಗೃತೆ ವಹಿಸುವುದು ಅತೀ ಅವಶ್ಯಕವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಪುರಭವನದಲ್ಲಿ ಮಂಗಳವಾರ ನಗರಸಭಾ ವ್ಯಾಪ್ತಿಯ ಮನೆಗಳಿಗೆ ಪ್ರಥಮ ಹಂತದ ಸೊಳ್ಳೆ ಪರದೆ ವಿತರಣೆ ಹಾಗೂ ಕೊರೋನಾ ಜಾಗೃತಿ ಮೂಡಿಸಲು ವಾರ್ಡ್ ವಾರು ಟಾಸ್ಕ್‌ಫೋರ್ಸ್ ಸಮಿತಿಯ ಮೂಲಕ ಮನೆ ಮನೆ ಭೇಟಿ ನೀಡುವಲ್ಲಿ ಸಹಕರಿಸಿದ ಸಿಬಂದಿಗಳಿಗೆ ಗೌರವಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ಕೊರೊನಾ ಮುಕ್ತ ನಗರ ಸಭೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನರ ಸಮಸ್ಯೆಗಳನ್ನು ಆಳಿಸಿ, ಅವರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಬಹಳಷ್ಟು ಜನಮನ್ನಣೆ ಗಳಿಸಿದೆ. ಜನ ಜೀವನ ಸಹಜ ಸ್ಥಿತಿಗೆ ಬರಬೇಕು. ಇದಕ್ಕಾಗಿ ಕೊರೊನಾ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸೋಂಕು ಹರಡುವುದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜತೆಗೆ ನಾಗರಿಕ ಪ್ರಜ್ಞೆಯಿಂದ ಸ್ಥಳಿಯಾಡಳಿತಗಳು ಯೋಜನೆಗಳನ್ನು ರೂಪಿಸುವ ಮೂಲಕ ಸರಕಾರದ ಹೊರೆಯನ್ನು ಹಗುರ ಮಾಡಿದೆ. ಮನೆ ಮನೆ ಭೇಟಿ ನೀಡಿ ಕೊರೋನಾ ಜಾಗೃತಿ ಅಭಿಯಾನದ ಪರಿಣಾಮ ನಗರ ಸಭಾ ವ್ಯಾಪ್ತಿಯಲ್ಲಿ ಇಳಿಮುಖವಾಗಿದೆ. ಉತ್ತಮ ಕಾರ್ಯನಿರ್ವಹಣೆಯ ಮೂಲಕ ಪುತ್ತೂರು ನಗರ ಸಭೆ ರಾಜ್ಯದಲ್ಲೇ ಗುರುತಿಸಬೇಕು ಎಂದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಡೆಂಗ್ಯು, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಮೊದಲ ಹಂತದಲ್ಲಿ ಆವಶ್ಯಕತೆ ಇರುವ ಕುಟುಂಬಗಳಿಗೆ ಸೊಳ್ಳೆ ಪರದೆ ವಿತರಣೆ ಮಾಡಲಾಗುವುದು. ಸದಸ್ಯರ ನೇತೃತ್ವದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಒಂದು ವಾರ್ಡ್‌ಗೆ ಒಟ್ಟು ೩೦ ಪರದೆಗಳನ್ನು ವಿತರಿಸಲಾಗುವುದು. ಮುಂದೆ ವಾರ್ಡ್‌ನ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ ಆವಶ್ಯಕತೆಯಿರುವವರ ಪಟ್ಟಿ ಮಾಡಿ ಆಧ್ಯತೆಯ ನೆಲೆಯಲ್ಲಿ ವಿತರಣೆಯಾಗಬೇಕು ಎಂದರು.
ಸಿಬಂದಿಗಳಿಗೆ ಗೌರವಾರ್ಪಣೆ;
ವಾರ್ಡ್ ಟಾಸ್ಕ್ ಫೋರ್ಸ್ ಸಮಿತಿ ಮೂಲಕ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಹಕರಿಸಿದ ನಗರ ಸಭಾ ನೋಡೆಲ್ ಅಧಿಕಾರಿಗಳು, ಸಿಬಂದಿಗಳು ಹಾಗೂ ಕೊರೊನಾ ಮಾರ್ಷಲ್ ಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ ಸದಸ್ಯರಾದ ಸುಂದರ ಪೂಜಾರಿ ಬಡಾವು, ಬಾಲಚಂದ್ರ ಮರೀಲ್, ಫಾತಿಮತ್ ಝೂರ, ಶಶಿಕಲಾ ಸಿ.ಎಸ್, ಪೂರ್ಣಿಮಾ ಹಾಗೂ ಸಿಬಂದಿಗಳು ಮನೆ ಮನೆ ಭೇಟಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಸದಸ್ಯರಾದ ಸಂತೋಷ್ ಬೊಳುವಾರು, ಬಾಲಚಂದ್ರ ಮರೀಲ್, ಮನೋಹರ್ ಕಲ್ಲಾರೆ, ಶಶಿಕಲಾ ಸಿ.ಎಸ್, ಯೂಸುಫ್ ಡ್ರೀಮ್, ಶಿವರಾಮ ಸಪಲ್ಯ, ಮೋಹಿನಿ ಬನ್ನೂರು, ವಸಂತ ಕಾರೆಕ್ಕಾಡು, ಇಂದಿರಾ ಪುರುಷೋತ್ತಮ, ಪದ್ಮನಾಭ ನಾಯ್ಕ, ರೋಹಿಣಿ, ಪ್ರೇಮ್ ಕುಮಾರ್, ಶೀನಪ್ಪ ನಾಯ್ಕ, ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.