ಕೊರೊನಾ ಮುನ್ನೆಚ್ಚರಿಕೆ ಸಾಂಪ್ರದಾಯಿಕ ಪುತ್ತೂರು ಜಾತ್ರೆ

ಪುತ್ತೂರು, ಮಾ.೩೦- ಜಾಗತಿಕ ಮಹಾಮಾರಿ ಕೊರೊನಾದ ೨ನೇ ಅಲೆಯ ಪ್ರಭಾವ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸಿ ಕೊಟ್ಟಿದ್ದು, ಈ ಬಾರಿಯ ಇತಿಹಾಸ ಪ್ರಸಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಸಾಂಪ್ರದಾಯಿಕವಾಗಿ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ಸೋಮವಾರ ದೇವಾಲಯದ ಸಭಾಭವನದಲ್ಲಿ ಪುತ್ತೂರು ಜಾತ್ರೆಯ ಪೂರ್ವಭಾವಿಯಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪುತ್ತೂರು ನಗರಸಭೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಜಾತ್ರಾ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಡೆಸಬೇಕು. ಆರೋಗ್ಯ ಇಲಾಖೆಯವರು ವಿಶೇಷವಾಗಿ ಜನಾರೋಗ್ಯದ ಕುರಿತು ಕ್ರಮಗಳನ್ನು ಕೈಗೊಳ್ಳಬೇಕು. ಜಾತ್ರೆಯ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗದಂತೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು ಎಂದು ಶಾಸಕರು ಸೂಚಿಸಿದರು.
ಜಾತ್ರೆಯ ಸಂದರ್ಭದಲ್ಲಿ ನಗರಸಭಾ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿಯೂ ವಿದ್ಯುತ್ ಮತ್ತು ನೀರು ಸರಬರಾಜಿನ ಕುರಿತು ಯಾವುದೇ ಅಡಚಣೆ ಉಂಟಾಗಬಾರದು ಎ.೧೬ ಮತ್ತು ೧೭ರಂದು ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಬೇಕು. ಕೆಎಸ್ಸಾರ್ಟಿಸಿಯವರು ಪ್ರತಿವರ್ಷದಂತೆ ಜಾತ್ರೆಯ ದಿನಗಳಲ್ಲಿ ರಾತ್ರಿ ವೇಳೆ ಬಸ್ಸು ಸಂಚಾರ ವ್ಯವಸ್ಥೆಯನ್ನು ಮಾಡಬೇಕು ಎಂದು ಶಾಸಕರು ಸೂಚಿಸಿದರು.
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ವಿ.ಎಸ್.ಭಟ್, ವೀಣಾ ಬಿ.ಕೆ, ಸುಧಾ ಎಸ್ ರಾವ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಿ. ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು ಉಪಸ್ಥಿತರಿದ್ದರು.
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ
ಸ್ವಾಗತಿಸಿ, ವಂದಿಸಿದರು.