ಕೊರೊನಾ ಮುಕ್ತಗೊಳಿಸುವುದೇ ನಮ್ಮ ಆದ್ಯತೆ

ಬಂಟ್ವಾಳ, ಮೇ ೨೧- ಪುದು ಗ್ರಾ.ಪಂ.ಸದಸ್ಯರಿಗೆ ಪ್ರತಿ ವಾರ್ಡ್ ಗಳ ಜವಾಬ್ದಾರಿ ನೀಡಿ ಅವರು ಆಯಾಯ ವಾರ್ಡ್ ಗಳಲ್ಲಿ ನಿಯಂತ್ರಣದ ಕಾರ್ಯ ಮಾಡಿದಾಗ ಪುದು ಗ್ರಾಮವನ್ನು ಕೊರೊನಾ ಮುಕ್ತಗೊಳಿಸಬೇಕು ಎಂದು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಗುರುವಾರ ಸುಜೀರ್ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಪುದು ಗ್ರಾ.ಪಂ.ನ ಕೊರೊನಾ ಕಾರ್ಯಪಡೆಯ ಸಭೆ ನಡೆಸಿದರು. ಕೊರೊನಾ ಪ್ರಕರಣಗಳನ್ನು ಸೊನ್ನೆಗೆ ತರುವುದು ಕಾರ್ಯಪಡೆಯ ಮೊದಲ ಆದ್ಯತೆಯಾಗಬೇಕು. ಬಂದಾಗ ನೋಡುವ ಬದಲು ಈಗಲೇ ಎಚ್ಚರಿಕೆ ವಹಿಸುವುದು ಅತಿ ಅಗತ್ಯ. ನಿಮ್ಮ ಸಮಸ್ಯೆಗಳು, ಸಲಹೆಗಳನ್ನು ಹೇಳಿದಾಗ ಕೊರೊನಾ ನಿಯಂತ್ರಣಕ್ಕೆ ನೆರವಾಗಲಿದೆ. ಗ್ರಾಮಕ್ಕೆ ಆಂಬುಲೆನ್ಸ್ ನೀಡುವಂತೆ ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಶಾಸಕರಿಗೆ ಬೇಡಿಕೆ ಸಲ್ಲಿಸಿದರು.
ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಅವರು ಕಾರ್ಯಪಡೆಯ ಕಾರ್ಯವೈಖರಿಯನ್ನು ತಿಳಿಸಿದರು. ಪಾಸಿಟಿವ್ ಕಂಡುಬಂದ ಮನೆಗಳಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಕಿಟ್ ವಿತರಣೆಯ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು. ಪುದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುದರ್ಶನ್ ಅವರು ಗ್ರಾಮದ ಕೊರೊನಾ ಪ್ರಕರಣಗಳ ವಿವರ, ಲಸಿಕೆ ಹಂಚಿಕೆ, ನಿಯಂತ್ರಣ ಕ್ರಮಗಳ ಕುರಿತು ತಿಳಿಸಿದರು.
ತಹಶೀಲ್ದಾರ್ ರಶ್ಮಿ ಎಸ್.ಆರ್., ಬಂಟ್ವಾಳ ತಾ.ಪಂ. ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ, ನೋಡೆಲ್ ಅಧಿಕಾರಿ ಬಿಇಒ ಜ್ಞಾನೇಶ್ ಎಂ.ಪಿ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ, ಗ್ರಾ.ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಅಮ್ಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಪಿಎಫ್‌ಐ ಅಧ್ಯಕ್ಷ ಗ್ರಾಮಕರಣಿಕೆ ನವ್ಯಾ ಎನ್.ಎಸ್. ಉಪಸ್ಥಿತರಿದ್ದರು.
ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸ್ವಾಗತಿಸಿದರು.