ಕೊರೊನಾ ಮಿತಿ ಮೀರಿ ದಾಖಲೆ, ಜನ ತಬ್ಬಿಬ್ಬು

Police keep vigil at an empty street in New Delhi on April 6, 2021, as the Indian capital imposed a night curfew a day after the nation posted a record coronavirus surge, with financial hub Mumbai also introducing similar restrictions. (Photo by Sajjad HUSSAIN / AFP)

ನವದೆಹಲಿ, ಏ.೭-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾರ್ವಕಾಲಿಕ ದಾಖಲೆ ಸೃಷ್ಠಿಸಿದೆ. ದಿನದಿಂದ ದಿನಕ್ಕೆ ಕೊರೊನಾ ಮಾಹಾಸ್ಪೋಟ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವನ್ನು ಆತಂಕಕ್ಕೆ ದೂಡಿದೆ.
ಕಳೆದ ಎರಡು ದಿನದ ಹಿಂದೆ ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನ ೧ ಲಕ್ಷ ಸೋಂಕು ಗಡಿ ದಾಟಿ ದೇಶದ ಜನರನ್ನು ಬೆಚ್ಚಿ ಬೀಳಿಸಿತ್ತು ನಿನ್ನೆ ತುಸು ಕಡಿಮೆಯಾಗಿದ್ದ ಸೋಂಕು ಪ್ರಕರಣ ಇದೀಗ ಮತ್ತೊಮ್ಮೆ ಒಂದೂ ಕಾಲು ಲಕ್ಷ ಗಡಿ ದಾಟಿ ಮತ್ತಷ್ಟು ಆತಂಕಕ್ಕೆ ಜನರನ್ನು ಸಿಲುಕುವಂತೆ ಮಾಡಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧,೧೫,೭೩೬ ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ದೇಶದಲ್ಲಿ ದಾಖಲೆ ಬರೆದಿದೆ. ಜೊತೆಗೆ ಅಮೇರಿಕಾ ಹೊರತು ಪಡಿಸಿದರೆ ದಿನವೊಂದಕ್ಕೆ ೧ ಲಕ್ಷಕ್ಕೂ ಹೆಚ್ಚು ಸೋಂಕು ದಾಖಲಾದ ಎರಡನೇ ದೇಶ ಭಾರತ ಎನ್ನುವ ಕುಖ್ಯಾತಿ ಪಡೆದಿದೆ.
ಇಂದು ಬೆಳಗ್ಗೆ ೮ ಗಂಟೆಯವರೆಗೆ ಹೊಸದಾಗಿ ೧,೧೫,೭೩೬ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ೬೩೦ ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ೫೯,೮೫೬ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ದಾಖಲಾಗಿರುವ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೧,೨೮,೦೧,೭೮೫ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಇಲ್ಲಿಯವರೆಗೆ ೧,೧೭,೯೨,೧೩೫ ಮಂದಿ ಚೇತರಿಸಿಕೊಂಡಿದ್ದು, ೧,೬೬,೧೭೭ ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ ಒಂದರಲ್ಲಿ ೫೫,೪೬೯ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ೨೯೭ ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರತಿ ನಿತ್ಯ ದಾಖಲಾಗುತ್ತಿರುವ ಸೋಂಕು ಮತ್ತು ಸಾವಿನಲ್ಲಿ ಮಹಾರಾಷ್ಟ್ರದ ಪಾಲು ನಿತ್ಯ ಅರ್ದಕ್ಕಿಂತ ಹೆಚ್ಚು ಸಾಗುತ್ತಲೇ ಇದೆ.
ಕರ್ನಾಟಕ. ಪಂಜಾಬ್, ಹರಿಯಾಣ, ಛತ್ತೀಸ್‌ಗಡ, ಚಂದಿಗಢ, ಕೇರಳ, ತಮಿಳುನಾಡು, ದೆಹಲಿ ಸೇರಿದಂತೆ ದೇಶದ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿತ್ಯ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗತ್ತಿದೆ. ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಸಕ್ರಿಯ ಪ್ರಕರಣ ಏರಿಕೆ:
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಸಾಗುತ್ತಿದೆ. ದೇಶದಲ್ಲಿ ಇರುವರೆಗೆ ೮,೪೩,೪೭೩ ಮಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ಕಳೆದ ಫೆಬ್ರವರಿ ಮಧ್ಯ ಭಾಗದಿಂದ ಇಲ್ಲಿಯವರೆಗೆ ದೇಶದಲ್ಲಿ ೭ ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು ಅದರಲ್ಲಿ ಮಹಾರಾಷ್ಟ್ರದಲ್ಲಿ ಬಹುಪಾಲು ಸಂಖ್ಯೆ ಇದೆ. ಮಹಾರಾಷ್ಟ್ರ ಸರ್ಕಾರವನ್ನು ಆತಂಕಕ್ಕೆ ಸಿಲುಕಿಸುವ ಜೊತೆಗೆ ಅಕ್ಕ ಪಕ್ಕದ ರಾಜ್ಯಗಳನ್ನು ಆತಂಕಕ್ಕೆ ಸಿಲುಕಿಸಿದೆ.

೮.೭೦ ಕೋಟಿಗೆ ಲಸಿಕೆ
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಮತ್ತೊಂದೆಡೆ ಲಸಿಕೆ ಹಾಕುವ ಕಾರ್ಯವೂ ಕೂಡ ಪ್ರಗತಿಯಲ್ಲಿದೆ.ಆದರೆ ಕೊರೊನಾ ಸೋಂಕು ಹೆಚ್ಚಳದ ವೇಗಕ್ಕೆ ತಕ್ಕಂತೆ ಲಸಿಕೆ ಹಾಕುತ್ತಿಲ್ಲ ಎನ್ನುವ ಮಾತುಗಳೂ ಕೇಳಿ ಬಂದಿವೆ. ಈ ನಡುವೆ ದೇಶದಲ್ಲಿ ನಿನ್ನೆಯ ತನಕ ೮,೭೦,೭೭,೪೭೪ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

೨೫ ಕೋಟಿ ಪರೀಕ್ಷೆ
ದೇಶದಲ್ಲಿ ಇದುವರೆಗೆ ೨೫ ಕೋಟಿಗೂ ಅಧಿಕ ಮಂದಿಗೆ ಕೊರೋನಾ ಸೋಂಕಿನ ಮಾದರಿ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ನಿನ್ನೆ ತನಕ ದೇಶದಲ್ಲಿ ೨೫,೧೪,೩೯,೫೯೮ ಮಂದಿಗೆ ಪರೀಕ್ಷೆ ಮಾಡಲಾಗಿದೆ. ನಿನ್ನೆ ಒಂದೇ ದಿನ ೧೨,೦೮,೩೨೯ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.