ಕೊರೊನಾ ಮಹಾಮಾರಿ : ಹೆಚ್ಚುವರಿ ಹಾಸಿಗೆ ಒದಗಿಸಲು ಜಿಲ್ಲಾಧಿಕಾರಿ – ಎಸ್.ಆರ್.ರೆಡ್ಡಿ ಚರ್ಚೆ

ಜಿಲ್ಲೆಯ ಜನರ ಸೇವೆಗೆ ೮೦೦ ಹಾಸಿಗೆ ಒದಗಿಸಲು ಸಿದ್ಧ – ಭರವಸೆ
ರಾಯಚೂರು.ಏ.೨೮- ಕೊರೊನಾ ಮಹಾಮಾರಿ ವಿರುದ್ಧದ ಸಂಘರ್ಷದಲ್ಲಿ ಜಿಲ್ಲಾಡಳಿತ ಪರವಾಗಿ ಎಲ್ಲಾ ರೀತಿಯ ಸೇವೆಗೆ ಸಿದ್ಧವಾಗಿದ್ದು, ನವೋದಯ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆಯೂ ಅಗತ್ಯಕ್ಕನುಗುಣವಾಗಿ ೮೦೦ ಹಾಸಿಗೆಗಳನ್ನು ಕೊರೊನಾ ಸೋಂಕು ಚಿಕಿತ್ಸೆಗೆ ಮೀಸಲಿಡಲು ಸಿದ್ಧವೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರಿಗೆ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿ ಅವರು ಭರವಸೆ ನೀಡಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿಗಳ ಆಹ್ವಾನದ ಮೇರೆಗೆ ಕಛೇರಿಗೆ ತೆರಳಿದ ಅವರು, ಜಿಲ್ಲೆಯ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನವೋದಯ ಯಾವ ರೀತಿಯಲ್ಲಿ ಈ ಮಹಾಮಾರಿಯ ವಿರುದ್ಧದ ಸಂಘರ್ಷದಲ್ಲಿ ನೆರವು ನೀಡಲಿದೆ ಎನ್ನುವುದನ್ನು ಜಿಲ್ಲಾಧಿಕಾರಿಗಳು, ಎಸ್.ಆರ್.ರೆಡ್ಡಿಯವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಅವರು, ತಮ್ಮ ಆಸ್ಪತ್ರೆಯ ಸೌಲಭ್ಯ ಮತ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಜನರ ಅನುಕೂಲಕ್ಕಾಗಿ ಮತ್ತು ಮಹಾಮಾರಿಯ ವಿರುದ್ಧದ ಸಂಘರ್ಷದಲ್ಲಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ತಕ್ಷಣವೇ ವೈದ್ಯಕೀಯ ಆಕ್ಸಿಜನ್, ರೆಮ್‌ಡಿಸಿವಿರ್ ಹಾಗೂ ಇತರೆ ಸಾಮಾಗ್ರಿಗಳ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಎಸ್.ಆರ್.ರೆಡ್ಡಿ ಅವರು ಸಲಹೆ ನೀಡಿದರು. ಮುಂಬರುವ ದಿನಗಳಲ್ಲಿ ಏಕಾಏಕಿ ಸೋಂತರ ಸಂಖ್ಯೆ ಮತ್ತಷ್ಟು ಹೆಚ್ಚಾದರೇ, ಪರಿಸ್ಥಿತಿ ಗಂಭೀರವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಲೇ ಎಲ್ಲಾ ವೈದ್ಯಕೀಯ ಮೂಲಭೂತ ಸೌಕರ್ಯ ಸಂಗ್ರಹಕ್ಕೆ ಅಗತ್ಯವೆಂದು ಹೇಳಿದರು.
ಪ್ರಸ್ತುತ ಓಪೆಕ್ ಆಸ್ಪತ್ರೆಯಲ್ಲಿ ಎಲ್ಲಾ ೧೫೦ ಹಾಸಿಗೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿವೆ. ರಿಮ್ಸ್ ಆಸ್ಪತ್ರೆಯಲ್ಲಿ ಶೇ.೭೦ ರಷ್ಟು ತುಂಬಿಕೊಂಡಿವೆ. ಯಾವುದೇ ಕ್ಷಣದಲ್ಲಿ ಉಳಿದ ಹಾಸಿಗೆಗಳು ಭರ್ತಿಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನವೋದಯ ವೈದ್ಯಕೀಯ ಕಾಲೇಜು ಎಷ್ಟು ಹಾಸಿಗೆಗಳನ್ನು ಕೊರೊನಾಕ್ಕೆ ನೀಡಬಹುದೆಂದು ಜಿಲ್ಲಾಧಿಕಾರಿಗಳು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಆರ್. ರೆಡ್ಡಿ ಅವರು, ಪ್ರಸ್ತುತ ೨೦೦ ಹಾಸಿಗೆಗಳಿಗೆ ಆಕ್ಸಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು ೮೦೦ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಒದಗಿಸಲು ಸಿದ್ಧವೆಂದು ಹೇಳಿದ ಅವರು, ಕಳೆದ ಸಲ ಜಿಲ್ಲಾಡಳಿತದ ಸೂಚನೆ ಮೇರೆಗೆ ೫೦ ಲಕ್ಷ ವೆಚ್ಚ ಮಾಡಿ, ಅತ್ಯುತ್ತಮ ಆಕ್ಸಿಜನ್ ಪೂರೈಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ, ಕೆಳ ಹಂತದಿಂದ ಆಸ್ಪತ್ರೆಗೆ ಕೇವಲ ೫, ೬ ಇಲ್ಲ ೧೦ ಸೋಂಕಿತರನ್ನು ಮಾತ್ರ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು.
ಇದರಿಂದ ಕಳೆದ ೯ ತಿಂಗಳ ಕಾಲ ವೈದ್ಯಕೀಯ ಕಾಲೇಜು ಇತರೆ ರೋಗಿಗಳಿಲ್ಲದೇ, ಇತ್ತ ಕೊರೊನಾ ಸೋಂಕಿತರು ಬಾರದೇ, ತೀವ್ರ ತೊಂದರೆಗೆ ಗುರಿಯಾಗಬೇಕಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ೨೦೦ ಹಾಸಿಗೆಗಳ ಆಕ್ಸಿಜನ್ ಮಹಾಮಾರಿ ಚಿಕಿತ್ಸೆಗೆ ಒದಗಿಸಲಾಗಿದೆಂದು ಹೇಳಿದಾಗ ಜಿಲ್ಲಾಧಿಕಾರಿಗಳು ಹೆಚ್ಚುವರಿಯಾಗಿ ಇನ್ನೂ ೨೦೦ ಆಕ್ಸಿಜನ ಸಹಿತ ಹಾಸಿಗೆಗಳನ್ನು ಒದಗಿಸುವಂತೆ ಕೋರಿದರು. ಇದಕ್ಕೆ ನವೋದಯ ಸಿದ್ಧವಾಗಿದೆ. ಆದರೆ, ಈಗೀರುವ ೨೦೦ ಹಾಸಿಗೆಗಳಲ್ಲಿ ೧೦೦ ಹಾಸಿಗೆಗಳಿಗೆ ಸೋಂಕಿತರು ತುಂಬುತ್ತಿದ್ದಂತೆ ೪೮ ಗಂಟೆಗಳಲ್ಲಿ ಹೆಚ್ಚುವರಿ ೨೦೦ ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಕಳೆದ ಸಲ ನವೋದಯದಲ್ಲಿ ಚಿಕಿತ್ಸೆ ಪಡೆದ ಕೊರೊನಾ ಸೋಂಕಿತರ ಬಾಬತ್ತು ಇನ್ನೂ ೨೭ ಲಕ್ಷ ರೂ. ಬಿಲ್ ಪಾವತಿಯಾಗಬೇಕು. ಇಲ್ಲಿವರೆಗೂ ಪಾವತಿಸುತ್ತಿಲ್ಲ. ಕೆಳ ಹಂತದ ಅಧಿಕಾರಿಗಳು ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಕೊರೊನಾ ಮಹಾಮಾರಿಯಲ್ಲಿ ಜಿಲ್ಲಾಡಳಿತದೊಂದಿಗೆ ಎಲ್ಲಾ ಸಹಕಾರ ನೀಡುವ ಉತ್ಸಹಕ್ಕೆ ಅಡ್ಡಿಯಾಗುವಂತಾಗಿದೆ. ಕೆಳ ಹಂತದ ಅಧಿಕಾರಿಗಳಿಗೆ ಕೊರೊನಾ ಮಹಾಮಾರಿಯ ಚಿಕಿತ್ಸೆಯಲ್ಲಿ ವೈದ್ಯಕೀಯ ಸೇವಾ ಸಂಸ್ಥೆಗಳಿಗೆ ಆದ್ಯತೆ ಮೇರೆಗೆ ಅಗತ್ಯ ಸೌಲಭ್ಯ ಮತ್ತು ಇನ್ನಿತರ ಕೆಲಸ ಕಾರ್ಯಗಳು ತುರ್ತು ಗತಿಯಲ್ಲಿ ನಿರ್ವಹಿಸುವಂತೆ ಸೂಚಿಸಲು ಕೋರಿದ ಅವರು, ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಯಾವುದೇ ತೊಂದರೆಗೊಳಗಾಗದಂತೆ ನವೋದಯ ಎಲ್ಲಾ ಸಹಾಯ ಸಹಕಾರ ನೀಡಲು ಸಿದ್ಧವಿದೆ. ನವೋದಯ ಆಸ್ಪತ್ರೆಯಲ್ಲಿ ೮೦೦ ಹಾಸಿಗೆಗಳು ಲಭ್ಯತೆ ಇದೆ. ಇದರಲ್ಲಿ ೪೦೦ ಆಕ್ಸಿಜನ್, ೪೦೦ ಆಕ್ಸಿಜನ ರಹಿತ ಹಾಸಿಗೆಗಳು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಒದಗಿಸಲು ನವೋದಯ ತಮ್ಮೊಂದಿಗಿದೆ.
ರೆಮ್‌ಡಿಸಿವಿರ್ ಔಷಧಿ ಪೂರೈಕೆಯನ್ನು ತ್ವರಿತಗತಿಯಲ್ಲಿ ಪೂರೈಸುವಂತಾಗಬೇಕು. ಪ್ರಸ್ತುತ ೨೦ ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಯಲ್ಲಿದ್ದು, ಈ ಎಲ್ಲಾರಿಗೆ ಅಗತ್ಯವಾದ ರೆಮ್‌ಡಿಸಿವಿರ್ ನೀಡುವಂತಹ ವ್ಯವಸ್ಥೆಯಾಗಬೇಕು. ರೆಮ್‌ಡಿಸಿವಿರ್ ಯಾವ ರೋಗಿಗೆ ಯಾವ ಹಂತದಲ್ಲಿ ನೀಡಬೇಕು ಎನ್ನುವುದು ಪ್ರಮುಖವಾಗಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಇಲ್ಲದಿರುವುದರಿಂದ ಇತರೆಡೆ ಸಿಟಿ ಸ್ಕ್ಯಾನ್ ಮಾಡಿಸಲಾಗುತ್ತದೆ. ಇದರಲ್ಲಿ ಶ್ವಾಸಕೋಶ ಸಮಸ್ಯೆಯನ್ನಾಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾರಿಗೆ ರೆಮ್‌ಡಿಸಿವಿರ್ ಅಗತ್ಯ ಎನ್ನುವುದನ್ನು ಸಿಟಿ ಸ್ಕ್ಯಾನ್ ಮೂಲಕ ಪರಿಶೀಲಿಸಿದರೇ, ರೆಮ್‌ಡಿಸಿವಿರ್ ಕ್ರಮ ಬದ್ಧತೆಯನ್ನು ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ, ಕಾಳಸಂತೆಯ ಮಾರಾಟವನ್ನು ತಪ್ಪಿಸಲು ಸಾಧ್ಯವಾಗುತ್ತದೆಂಬ ಸಲಹೆ ನೀಡಿದರು.