ಕೊರೊನಾ ಮಹಾಮಾರಿ : ಸಾವು ನಿಯಂತ್ರಣ – ಪ್ರಕರಣ ಇಳಿಕೆ

ಜಿಲ್ಲೆಯಲ್ಲಿ ನೆಮ್ಮದಿ – ಎರಡನೇ ಹಂತದ ಮಹಾಮಾರಿಯ ಆತಂಕದಲ್ಲಿ ಜನ
ರಾಯಚೂರು.ನ.19- ಮಹಾಮಾರಿ ಕೊರೊನಾ ಆರಂಭಗೊಂಡು ಒಂದು ವರ್ಷ ಕಳೆಯುವ ಹಂತದಲ್ಲಿ ಪ್ರಕರಣ ಸಂಖ್ಯೆ 3 ಮತ್ತು 2 ಅಂಕಿಗಳಿಂದ ಇಳಿದು 1 ಅಂಕಿಗೆ ಸೀಮಿತವಾಗುವ ಮಟ್ಟಕ್ಕೆ ನಿಯಂತ್ರಣಕ್ಕೆ ಬಂದಿದೆ.
ನಿನ್ನೆ ಜಿಲ್ಲೆಯಲ್ಲಿ ಕೇವಲ 8 ಕೊರೊನಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇಲ್ಲಿವರೆಗೂ 13,579 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿ, 13,257 ಜನ ಆರೋಗ್ಯವಾಗಿ ಬಿಡುಗಡೆಗೊಂಡಿದ್ದಾರೆ. ಕಳೆದ 9 ತಿಂಗಳಲ್ಲಿ 154 ಜನ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಮೃತರ ಸಂಖ್ಯೆಯೂ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯ ಕೊರೊನಾಕ್ಕೆ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಸೇರಿದಂತೆ 154 ಜನ ಕೊರೊನಾಕ್ಕೆ ಬಲಿಯಾಗಿದ್ದು, ಇತ್ತೀಚಿಗೆ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಪ್ರಸ್ತುತ 168 ಸಕ್ರಿಯ ಕೊರೊನಾ ರೋಗಿಗಳಿದ್ದಾರೆ.
ರಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಒಬ್ಬರು ಮಾತ್ರ ಚಿಕಿತ್ಸೆ ದಾಖಲಾಗಿದ್ದು, ಒಟ್ಟು 27 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 129 ಕೊರೊನಾ ಸೋಂಕಿತರು ಹೋಮ ಕ್ವಾರಂಟೈನ್‌ನಲ್ಲಿದ್ದಾರೆ. ನವೋದಯ ಮೆಡಿಕಲ್ ಕಾಲೇಜು ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿವರೆಗೂ 1,74,232 ಜನರ ಮಾದರಿ ಸಂಗ್ರಹಿಸಲಾಗಿದೆ. ಇವರಲ್ಲಿ 1.58 ಲಕ್ಷ ಜನ ನೆಗೆಟಿವ್ ಎಂದು ಗುರುತಿಸಿಕೊಂಡಿದ್ದಾರೆ. ಮೇ.16 ರವರೆಗೂ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗದೆ, ಜಿಲ್ಲೆ ಹಸಿರು ವಲಯವೆಂದು ಗುರುತಿಸಿಕೊಂಡಿತು.
ಆದರೆ, ನಂತರದ ಐದಾರು ತಿಂಗಳು ತೀವ್ರ ಸ್ವರೂಪದ ಕೊರೊನಾ ಪ್ರಕರಣ ಪತ್ತೆ ಜನ ಆತಂಕಕ್ಕೆ ಗುರಿಯಾಗುವಂತೆ ಮಾಡಿತ್ತು. ಆರಂಭದಲ್ಲಿ ಐದು, ಆರು ಪ್ರಕರಣ ಪತ್ತೆಯಾಗುತ್ತಿರುವ ಜಿಲ್ಲೆಯಲ್ಲಿ ಏಕಾಏಕಿ ಶತಕ, ದ್ವಿಶತಕ, ತ್ರಿಶತಕ ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಪತ್ತೆ ಕಾರ್ಯ ಗಣನೀಯವಾಗಿ ಕುಸಿತವಾಗಿದೆ. ಪ್ರತಿನಿತ್ಯ ಸುಮಾರು 700 ಜನರ ಸಂಶಯಾಸ್ಪದ ಆಧಾರದ ಮೇಲೆ ಮಾದರಿ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ.
8 ರಿಂದ 30 ಪ್ರಕರಣ ಮಾತ್ರ ಪತ್ತೆಯಾಗುತ್ತಿವೆ. ಈ ಒಂದು ತಿಂಗಳ ಅವಧಿಯಲ್ಲಿ ಕನಿಷ್ಟ 10 ರಿಂದ 15 ದಿನಗಳು ಒಂದಂಕ್ಕೆಯಲ್ಲಿ ಪ್ರಕರಣ ಪತ್ತೆಯಾಗಿವೆ. ಇದು ಜಿಲ್ಲೆಯಲ್ಲಿ ಕೊರೊನಾ ಇಳಿಮುಖಕ್ಕೆ ನಿದರ್ಶನವಾಗಿದೆ. ಕೊರೊನಾ ಪ್ರಕರಣಗಳ ಪತ್ತೆ ಕುಸಿತಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಿವೆ. ತಪಾಸಣೆ ಸಂಖ್ಯೆ ಕಡಿಮೆಯಾಗಿದ್ದರಿಂದ ಕೊರೊನಾ ಪ್ರಕರಣಗಳ ಪತ್ತೆ ಕಾರ್ಯ ಕುಸಿದಿದೆಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕುಸಿತದೊಂದಿಗೆ ಸಾವಿನ ಸಂಖ್ಯೆ ನಿಯಂತ್ರಣದಲ್ಲಿರುವುದು ಜನ ಸಮಾಧಾನದಿಂದ ನಿಟ್ಟುಸಿರು ಬಿಡುವಂತೆ ಮಾಡಿದೆ. ಜಗತ್ತಿನಲ್ಲಿ ಎರಡನೇ ಹಂತದ ಕೊರೊನಾ ಸೋಂಕಿನ ಆಪತ್ತು ತಲೆಯೆತ್ತಿದ್ದರಿಂದ ಜಿಲ್ಲೆಯಲ್ಲಿಯೂ ಇದು ಮರಕಳುಹಿಸಬಹುದೆ ಎನ್ನುವ ಭಯ ಜನರನ್ನು ಕಾಡುವಂತೆ ಮಾಡಿದೆ. ಆದರೆ, ಪ್ರಸ್ತುತ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಒಂದಷ್ಟು ವ್ಯಾಪಾರ ವಹಿವಾಟು ಮತ್ತಿತರ ಚಟುವಟಿಕೆ ತೀವ್ರಗೊಂಡು, ಆರ್ಥಿಕ ವ್ಯವಹಾರ ಹೆಚ್ಚಲು ಕಾರಣವಾಗಿದೆ.
2020 ಆರಂಭದಿಂದ ಕೊರೊನಾ ಭೀತಿಯಲ್ಲಿಯೇ ಜನ ಜೀವನ ಕಳೆಯುತ್ತ ಸಾಗಿದ್ದಾರೆ. 2021 ಈ ಮಹಾಮಾರಿ ಮುಕ್ತಗೊಂಡು ಜನ ಸಾಮಾನ್ಯ ಜೀವನ ನಡೆಸಲು ನೆರವಾಗುವುದೇ ಎಂದು ಕಾದು ನೋ‌ಡಬೇಕಾಗಿದೆ.