ಕೊರೊನಾ ಮಹಾಮಾರಿ : ಶಿವರಾಜ ಪಾಟೀಲ್ – ರವಿ ಬೋಸರಾಜು ಮಧ್ಯೆ ಕದನಕ್ಕೆ ದಾರಿ

ಆಕ್ಸಿಜನ್ ಕೊರತೆ ಸುಳ್ಳು – ಶಾಸಕ : ಆಕ್ಸಿಜನ್ ಕೊರತೆ ಸಾಕ್ಷಿ ವಿಡಿಯೋ ಬಿಡುಗಡೆ
ರಾಯಚೂರು.ಮೇ.೧೮- ಕೊರೊನಾ ಮಹಾಮಾರಿಯ ಲೋಪದೋಷ ಮತ್ತು ಸೌಕರ್ಯಗಳ ವಿಷಯಕ್ಕೆ ಸಂಬಂಧಿಸಿ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರ ಮಧ್ಯೆ ಆರೋಪ, ಪ್ರತ್ಯಾರೋಪಗಳು ತಾರಕ್ಕೇರಿವೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಯಾವುದೇ ಕೊರತೆಯಿಲ್ಲ. ಎಲ್ಲಾ ಸೌಲಭ್ಯಗಳು ನೀಡಲಾಗುತ್ತಿದೆ. ಓಪೆಕ್ ಮತ್ತು ರಿಮ್ಸ್ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಜನ್ ಕೊರತೆ ಪ್ರಶ್ನೆಯೇ ಉದ್ಭವಿಸಿಲ್ಲ. ಕೇವಲ ಕೆಲವರು ಡೋಂಗಿ ಮತ್ತು ನಾಟಕ ಮಾಡುತ್ತಿದ್ದಾರೆಂಬ ಆರೋಪ ಶಾಸಕರು ಮಾಡಿರುವುದನ್ನು ಗಂಭೀರ ಪರಿಗಣಿಸಿ, ರವಿ ಬೋಸರಾಜು ಅವರ ತಂಡ ಆಕ್ಸಿಜನ್ ಕೊರತೆಯ ಸಂದರ್ಭದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಎಸ್.ಆರ್. ರೆಡ್ಡಿಯವರ ಮಾಧ್ಯಮದ ಹೇಳಿಕೆ ಮತ್ತು ನಿನ್ನೆ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಹೇಳಿಕೆಗಳನ್ನು ವಿಡಿಯೋ ಸಂಕಲನದೊಂದಿಗೆ ಬಿಡುಗಡೆ ಮಾಡಲಾಗಿದೆ.
ಆಕ್ಸಿಜನ್ ಮತ್ತು ರೆಮ್‌ಡಿಸಿವಿರ್ ಕೊರತೆ ಬಗ್ಗೆ ಜಿಲ್ಲೆಯಲ್ಲಿರುವ ಪರಿಸ್ಥಿತಿ ಜನರ ಮುಂದೆ ಇಡುವ ಪ್ರಯತ್ನ ಮಾಡಲಾಗಿದೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ರವಿ ಬೋಸರಾಜು ಅವರ ಮಧ್ಯೆ ಇಲ್ಲಿವರೆಗೂ ನೇರವಾಗಿ ಯಾವುದೇ ಮುಖಾಮುಖಿ ಸಂವಾದ ನಡೆದಿಲ್ಲ. ಆದರೆ, ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡುವ ಕಾಳಗ ಮುಂದುವರೆದಿದೆ. ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳ ಅವ್ಯವಸ್ಥೆ ಮತ್ತು ಅಲ್ಲಿಯ ಸಿಬ್ಬಂದಿಗೆ ವೇತನ ನೀಡದಿರುವ ವಿಷಯಕ್ಕೆ ಸಂಬಂಧಿಸಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಪ್ರತಿಕ್ರಿಯಿಸುತ್ತಾ, ಕೆಲವರು ಅಲ್ಲಿಯ ಸಿಬ್ಬಂದಿಗೆ ೩ ಸಾವಿರ ನೀಡುವ ನಾಟಕ ಮಾಡುತ್ತಿದ್ದಾರೆ. ಅಲ್ಲದೇ, ಆಕ್ಸಿಜನ್ ಕೊರತೆಯ ಡೋಂಗಿತನ ಪ್ರದರ್ಶಿಸಲಾಗುತ್ತಿದೆಂದು ನೇರವಾಗಿ ಆರೋಪಿಸಿರುವುದು ರವಿ ಬೋಸರಾಜು ಬಣ ಗರಂ ಆಗುವಂತೆ ಮಾಡಿದೆ.
ಆಕ್ಸಿಜನ್ ಕೊರತೆಗೆ ಸಂಬಂಧಿಸಿ ನಾವು ಸುಳ್ಳು ಹೇಳಿರುವುದನ್ನು ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದ ಅವರು, ಅಂದು ನವೋದಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ನವೋದಯಲ್ಲಿ ಮಾತ್ರವಲ್ಲದೇ, ಇತರೆ ಆಸ್ಪತ್ರೆಗಳಲ್ಲೂ ಈ ಕೊರತೆ ತೀವ್ರವಾಗಿತ್ತು. ನವೋದಯ ವೈದ್ಯಕೀಯ ಕಾಲೇಜಿಗೆ ನಾವು ಸುಮಾರು ೨೬ ಜಂಬೋ ಸಿಲಿಂಡರ್ ಆಕ್ಸಿಜನ್ ಸಂಗ್ರಹಿಸಿಕೊಟ್ಟಿದ್ದೇವೆ. ಇದನ್ನು ಸಾಬೀತು ಪಡಿಸಿದರೇ, ಡಾ.ಶಿವರಾಜ ಪಾಟೀಲ್ ಅವರು ರಾಜೀನಾಮೆ ಕೊಟ್ಟು ಹೋಗುತ್ತಾರೆಯೇ ಅಥವಾ ಕ್ಷಮೆಯಾಚಿಸುತ್ತಾರೆಯೇ ಎನ್ನುವ ಮಟ್ಟಕ್ಕೆ ಪ್ರತಿಕ್ರಿಯೆ ನೀಡಲಾಗಿದೆ.
ಅಲ್ಲದೇ, ಶಾಸಕರು ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಸಕ್ರಮವಾಗಿ ನಿರ್ವಹಿಸಿದ್ದರೇ, ಆಸ್ಪತ್ರೆ ಭೇಟಿ ನಿರ್ಬಂಧಕ್ಕೆ ಕಾರಣವೇನು? ಎಂದು ಕೇಳಿದ್ದಾರೆ. ಕೊರೊನಾ ಮಹಾಮಾರಿಯ ಲೋಪದೋಷಗಳು ಮತ್ತು ಚಿಕಿತ್ಸಾ ವಿಧಿವಿಧಾನ ಬಗ್ಗೆ ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಪಕ್ಷಗಳ ಮಧ್ಯೆ ಕದನ ಗಂಭೀರ ಸ್ವರೂಪ ಪಡೆದುಕೊಂಡಿದೆ. ಡಾ.ಶಿವರಾಜ ಪಾಟೀಲ್ ಅವರು ಕೊರೊನಾದ ಮಹಾಮಾರಿಯ ಸಂದರ್ಭದಲ್ಲಿ ಇಂತಹ ರಾಜಕೀಯ ಸರಿಯಲ್ಲವೆಂದು ಮಾಧ್ಯಮದಲ್ಲಿ ಹೇಳಿದ್ದರೇ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ನಾವು ರಾಜಕೀಯ ಮಾಡಿಲ್ಲ, ಜನರ ನೆರವಿಗೆ ನಿಂತಿದ್ದೇವೆಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗೆ ೩ ಸಾವಿರ ಹಣ ನೀಡಿ, ಅಲ್ಲಿಯ ಅವ್ಯವಸ್ಥೆ ಮತ್ತು ಇನ್ನಿತರ ಫೋಟೋ ಮತ್ತು ವಿಡಿಯೋ ಮಾಡಲು ಹೇಳಲಾಗುತ್ತಿದೆಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಯುವ ನಾಯಕ ರವಿ ಬೋಸರಾಜು ಅವರಿಗೆ ೩ ಸಾವಿರ ರೂ. ಏಕೆ ನೀಡಿದ್ದಾಗಿಯೂ ಸ್ಪಷ್ಟಪಡಸುವುದರೊಂದಿಗೆ ಕಳೆದ ಒಂದುವರೆ ತಿಂಗಳಾದರೂ ಇವರಿಗೆ ವೇತನ ದೊರೆತಿಲ್ಲ. ವೇತನ ದೊರೆಕಿಸಿಕೊಡುವ ಜವಾಬ್ದಾರಿ ಶಾಸಕರಿಗಿಲ್ಲವೇ?. ತಾಕತ್ತಿದ್ದರೇ ಮೊದಲು ವೇತನ ಬಿಡುಗಡೆಗೊಳಿಸಿ, ನಂತರ ಮಾತನಾಡುವಂತೆ ಟಾಂಗ್ ನೀಡಿದ್ದಾರೆ.
ನವೋದಯ ಕಾಲೇಜು ಆಕ್ಸಿಜನ್ ಕೊರತೆ ಸಂದರ್ಭಕ್ಕೆ ಸಂಬಂಧಿಸಿ, ಶಾಸಕ ಡಾ.ಶಿವರಾಜ ಪಾಟೀಲ್ ಅವರು ನೀಡಿದ ಹೇಳಿಕೆ ಸುಳ್ಳು ಎನ್ನುವುದನ್ನು ಸಾಬೀತು ಪಡಿಸಲು ಅದೇ ದಿನ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾಧ್ಯಮಕ್ಕೆ ನೀಡಿದ ಹೇಳಿಕೆಯೊಂದನ್ನು ದಾಖಲೆಯಾಗಿ ಬಿಡುಗಡೆಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಶಿವರಾಜ ಪಾಟೀಲ್ ಅವರ ಹೇಳಿಕೆ ಮತ್ತು ಆಕ್ಸಿಜನ್ ಕೊರತೆಯ ಪುರಾವೆಯೊಂದಿಗೆ ಬಿಡುಗಡೆ ಮಾಡಿರುವುದು ಡಾ.ಶಿವರಾಜ ಪಾಟೀಲ್ ಮತ್ತು ರವಿ ಬೋಸರಾಜು ಅವರ ಮಧ್ಯದ ರಾಜಕೀಯ ಸಂಘರ್ಷ ತೀವ್ರತೆಗೆ ಮತ್ತೊಂದು ನಿದರ್ಶನವಾಗಿದೆ.