ಕೊರೊನಾ ಮಹಾಮಾರಿ : ಎಚ್ಚರ ತಪ್ಪಿದರೆ ಸಾವು – ಸುರಕ್ಷಿತವಾಗಿ ಮನೆಯಲ್ಲಿರಿ

 • ಅನಗತ್ಯ ಹೊರಗೆ ಬೇಡ : ಜಿಲ್ಲಾಡಳಿ, ಆರೋಗ್ಯ ಇಲಾಖೆ, ಪೊಲೀಸರಿಗೆ ಸಹಕರಿಸಿ
  ರಾಯಚೂರು.ಏ.೨೨- ಕೋವಿಡ್ ಮಹಾಮಾರಿ ನಿಯಂತ್ರಣ ಕೇವಲ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮಾತ್ರ ಜವಾಬ್ದಾರಿಯಲ್ಲ. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿಯದಿದ್ದರೇ, ಮಾರಣಾಂತಿಕ ಈ ಸೋಂಕಿಗೆ ಬಲಿಯಾಗುವುದು ನಾಗರೀಕರೇ ಎನ್ನುವುದು ಮರೆಯುವಂತಿಲ್ಲ.
  ಕಳೆದ ಇಪತ್ತು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಕೊರೊನಾ ಪ್ರಕರಣಗಳು ಹೆಚ್ಚುತ್ತಲಿವೆ. ಆದರೆ, ಜನರು ಮಾತ್ರ ತಮ್ಮ ಬೇಜವಾಬ್ದಾರಿತನವನ್ನು ಬಿಟ್ಟು, ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಸಾವಿನ ಸಂಖ್ಯೆ ತೀವ್ರಗೊಂಡಿದೆ. ಕಳೆದ ವರ್ಷ ಅತ್ಯಂತ ಕಠಿಣ ದಿನಗಳನ್ನು ಕಳೆದ ಜನರಿಗೆ ಈ ವರ್ಷದ ಕೊರೊನಾ ಮಹಾಮಾರಿಯ ಭಯವೇ ಇಲ್ಲದೇ, ಸ್ವಯಂ ಸಾವಿನತ್ತ ನಡೆಯುತ್ತಿರುವುದು ಸಮಾಜದಲ್ಲಿ ಕಾಣಬಹುದಾಗಿದೆ.
  ಜಿಲ್ಲಾಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಅನುಸರಿಬೇಕಾದ ಕನಿಷ್ಟ ನಿಯಮ ಬಗ್ಗೆ ಜಾಗೃತಿ ಮಾಡುತ್ತಿದ್ದರೂ, ಮತ್ತು ಕಳೆದ ವರ್ಷ ಕೊರೊನಾವನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವನ್ನು ಈಗ ಜನ ಮರೆತು ಪರಿಣಾಮ ತುಂಬು ಜೀವನ ಕಳೆಯಬೇಕಾದ ಅನೇಕರು ಕೊರೊನಾ ಮಹಾಮಾರಿಯ ದಾಳಿಗೆ ಗುರಿಯಾಗಿ, ಕುಟುಂಬಗಳು ಅನಾಥರಾಗುವಂತೆ ಮಾಡಿದ್ದಾರೆ.
  ‘ಕೊರೊನಾಗೆ ನೀನೊಂದು ಜೀವ ಮಾತ್ರ, ಸರ್ಕಾರಕ್ಕೆ ನೀನೊಂದು ಸಂಖ್ಯೆ ಮಾತ್ರ. ಆದರೆ, ನಿನ್ನ ಕುಟುಂಬಕ್ಕೆ ನಿನೊಂದು ಅಮೂಲ್ಯರತ್ನ. ನಿನ್ನ ಆರೋಗ್ಯ ನಿನ್ನ ಜವಾಬ್ದಾರಿ ಎನ್ನುವ ಹತ್ತಾರು ಪೋಸ್ಟರ್‌ಗಳು ವಾಟ್ಸಾಪ್‌ಗಳಲ್ಲಿ ಬರುತ್ತಿದ್ದರೂ, ಇನ್ನೂ ಜನರ ಜಾಗೃತಿಗೊಳ್ಳದಿದ್ದರೇ, ಈ ಸಾವಿಗೆ ಹೊಣೆ ಯಾರು?. ದೇಶಾದ್ಯಂತ ಕೊರೊನಾ ಮಹಾಮಾರಿ ಬಿಭತ್ಸ ಶವ ಸಂಸ್ಕಾರಕ್ಕೂ ಸ್ಥಳವಿಲ್ಲದಂತೆ ಮಾಡಿದೆ. ಮಾಧ್ಯಮಗಳಲ್ಲಿ ಈ ಚಿತ್ರಗಳು ಪ್ರಸಾರಗೊಳ್ಳುತ್ತಿವೆ. ಸರ್ಕಾರ, ಜಿಲ್ಲಾಡಳಿತ ಪದೇ ಪದೇ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದಲ್ಲದೇ, ಅನಗತ್ಯವಾಗಿ ಹೊರಗೆ ಬರುವುದು ಬೇಡವೆಂದು ಮನವರಿಕೆ ಮಾಡುತ್ತಿದ್ದರೂ, ಜನ ಮಾತ್ರ ಬಿಂದಾಸಾಗಿ ಓಡಾಡಿಕೊಂಡಿದ್ದಾರೆ.
  ನಾಗರೀಕ ವ್ಯವಸ್ಥೆಯಲ್ಲಿ ಬದುಕುವ ನಮಗೆ ಪೊಲೀಸರು ಲಾಠಿ ಪೆಟ್ಟಿನಿಂದ ಬುದ್ಧಿಹೇಳಬೇಕೇ?. ನಿಯಮಗಳನ್ನು ಉಲ್ಲಂಘನೆಗೆ ದಂಡ ವಿಧಿಸಿ, ಅರಿವು ಮೂಡಿಸಬೇಕು. ನಮ್ಮ ಜೀವ ಮತ್ತು ನಮ್ಮ ಕುಟುಂಬದ ಸುರಕ್ಷೆಯ ಬಗ್ಗೆ ನಿರ್ಲಕ್ಷ್ಯಿಸಿ, ನಡೆದುಕೊಂಡರೇ, ಆಗುವ ಪರಿಣಾಮಗಳ ಬಗ್ಗೆ ಈಗಾಗಲೇ ಕೊರೊನಾ ಮಹಾಮಾರಿಗೆ ಬಲಿಯಾದ ಕುಟುಂಬಗಳನ್ನು ನೋಡಿಯಾದರೂ, ಜಾಗೃತಿಗೊಳ್ಳುವ ಅಗತ್ಯವಿದೆ. ನಿಮ್ಮನ್ನೇ ನಂಬಿಕೊಂಡು ಒಂದು ಕುಟುಂಬ ಬದುಕುತ್ತಿದೆ. ಆ ಕುಟುಂಬ ನೂರಾರು ಕಾಲ ಸುರಕ್ಷೆಯಿಂದ ಬಾಳಿ ಬದುಕಲು ಒಂದು ಜಾಗೃತಿ ಸಾಕು.
  ಮಾಸ್ಕ್, ಸ್ಯಾನಿಟೇಸರ್ ಮತ್ತು ಸಾಮಾಜಿಕ ಅಂತರ ಕೊರೊನಾ ಮಹಾಮಾರಿ ಕೊರೊನಾ ಎದುರಿಸಲು ಬಹುದೊಡ್ಡ ಅಸ್ತ್ರವಾಗಿದೆ. ಇಂತಹ ದೊಡ್ಡ ಅಸ್ತ್ರದ ಬಗ್ಗೆ ನಿರ್ಲಕ್ಷ್ಯೆ ವಹಿಸಿ, ನಾವಾಗಿ ಸಾವಿನ ದವಡೆಗೆ ಹೋಗುವುದು ಎಷ್ಟು ಸರಿ. ದಯವಿಟ್ಟು ಸಾರ್ವಜನಿಕರು ಕೊರೊನಾ ಮಹಾಮಾರಿಯನ್ನು ಗಂಭೀರವಾಗಿ ಪರಿಗಣಿಸಿ, ಸಾಧ್ಯವಾದಷ್ಟು ಓಡಾಡ ಮಾಡದೇ, ಮನೆಗಳಲ್ಲಿ ಇರಲು ನಿರ್ಧರಿಸಬೇಕಾಗಿದೆ. ಅಗತ್ಯವಿದ್ದ ಸಂದರ್ಭದಲ್ಲಿ ಮಾಸ್ಕ್ ಮತ್ತು ಸ್ಯಾನಿಟೇಸರ್‌ನೊಂದಿಗೆ ಸಂಚರಿಸುವುದು ಅಲ್ಲದೇ, ಸಾಮಾಜಿಕ ಅಂತರದ ಬಗ್ಗೆ ಸ್ವಯಂ ಜಾಗೃತಿ ಹೊಂದಿರಬೇಕು.
  ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸರು ತಮ್ಮದೇಯಾದ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸಬಹುದು. ಆದರೆ, ಜನ ಜಾಗೃತಿಯಾಗದಿದ್ದರೇ, ಅವರ ಪ್ರಯತ್ನ ವ್ಯರ್ಥವಾಗುತ್ತದೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆ ನೀಡುವ ವೈದ್ಯರಿಗೂ ಈ ಸಂಖ್ಯೆ ಹೆಚ್ಚಳ ಕಾರ್ಯ ನಿರ್ವಹಿಸಲು ತೊಂದರೆಯಾಗಿದೆ. ಜನರ ನಿರ್ಲಕ್ಷ್ಯೆಯಿಂದ ಪ್ರಕರಣಗಳು ಹೆಚ್ಚುತ್ತಾ ಹೋದರೇ, ಮುಂಬರುವ ದಿನಗಳಲ್ಲಿ ಜನ ಹಾದಿ, ಬೀದಿಯಲ್ಲಿ ಸಾಯುವ ಅನಾಹುತ ಬಂದೊದಗಿದರೂ ಅಚ್ಚರಿ ಪಡಿಯುವಂತಿಲ್ಲ.
  ಈ ಹಿನ್ನೆಲೆಯಲ್ಲಿ ತಕ್ಷಣವೇ ಪ್ರತಿಯೊಬ್ಬ ನಾಗರೀಕರು ತಮ್ಮ ಜವಾಬ್ದಾರಿಯನ್ನು ಅರಿತು ಸ್ವಯಂ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗದಿದ್ದರೇ, ಆಗುವ ನಷ್ಟಕ್ಕೆ ನಾವು, ನಮ್ಮ ಕುಟುಂಬ ಬೀದಿ ಪಾಲಾಗುವ ಸಾಧ್ಯತೆಗಳಿವೆ. ದಯವಿಟ್ಟು ಜಿಲ್ಲಾಡಳಿತ, ಪೊಲೀಸರಿಗೆ ಸಹಕರಿಸಿ, ಕೊರೊನಾ ಮಹಾಮಾರಿಯಿಂದ ಸುರಕ್ಷಿತವಾಗಿ ಇರಲು ಮನಸು ಮಾಡಿ. ಪ್ರತಿ ಜೀವಕ್ಕೂ ಬೆಲೆ ಇದೆ. ಈ ಜೀವ ಕೊರೊನಾ ಮಹಾಮಾರಿಗೆ ಬಲಿಯಾಗದಂತೆ ಎಚ್ಚರ ವಹಿಸಿ. ನಮ್ಮ ಎಚ್ಚರ ನಮ್ಮ ಆಯುರಾರೋಗ್ಯ.