ಕೊರೊನಾ ಮಧ್ಯೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಏ. ೨೭- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ನಡುವೆಯೇ ೮ ಜಿಲ್ಲೆಗಳ ೧೦ ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆದಿದೆ.
ರಾಮನಗರ, ಚನ್ನಪಟ್ಟಣ ನಗರಸಭೆಯ ತಲಾ ೩೧ ವಾರ್ಡ್‌ಗಳಿಗೆ, ವಿಜಯಪುರ, ಬೇಲೂರು ಪುರಸಭೆಯ ೨೩ ವಾರ್ಡ್‌ಗಳಿಗೆ, ಬಳ್ಳಾರಿಯ ಮಹಾನಗರ ಪಾಲಿಕೆಯ ೩೯ನೇವಾರ್ಡ್‌ಗೆ, ಭದ್ರಾವತಿ, ಬೀದರ್ ನಗರಸಭೆಯ ತಲಾ ೩೫ ವಾರ್ಡ್‌ಗಳಿಗೆ, ಮಡಿಕೇರಿ ನಗರಸಭೆಯ ೨೩ ವಾರ್ಡ್‌ಗಳಿಗೆ, ಗುಡಿಬಂಡೆ ಪಟ್ಟಣ ಪಂಚಾಯ್ತಿಯ ೧೧ ವಾರ್ಡ್‌ಗಳಿಗೆ, ಹಾವೇರಿ ಜಿಲ್ಲೆಯ ಹಿರೆಕೆರೂರು ಪಟ್ಟಣ ಪಂಚಾಯ್ತಿಯ ೧ ವಾರ್ಡ್‌ಗೆ , ಬೀದರ್ ಜಿಲ್ಲೆಯ ಹಳ್ಳಿಖೇಡ ಪಟ್ಟಣ ಪಂಚಾಯ್ತಿಯ ೧೧ ವಾರ್ಡ್‌ಗಳಇಗೆ ಇಂದು ಮತದಾನ ನಡೆದಿದೆ.
ಈ ನಗರ ಸ್ಥಳೀಯ ಸಂಸ್ಥೆಗಳ ಮತದಾನ ನಡೆದಿರುವ ನಗರ ಪಟ್ಟಣಗಳಲ್ಲಿ ಜನ ಬೆಳಗ್ಗೆಯಿಂದಲೇ ಮತ ಚಲಾಯಿಸುತ್ತಿದ್ದು, ಹಲವೆಡೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ದೃಶ್ಯಗಳು ಕಂಡು ಬಂತು.
ಕೋವಿಡ್ ಕಾರಣದಿಂದ ಚುನಾವಣಾ ಆಯೋಗವು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಚುನಾವಣೆಗಳನ್ನುನಡೆಸುತ್ತಿದ್ದು, ಪ್ರತಿ ಮತಗಟ್ಟೆ ಸಿಬ್ಬಂದಿಗೂ ರಕ್ಷಣೆಗಾಗಿ ಕೋವಿಡ್ ನಿಯಂತ್ರಣ ಸಾಮಗ್ರಿಗಳನ್ನು ಕಿಟ್ ರೂಪದಲ್ಲಿ ನೀಡಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಬಂದವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.