ಕೊರೊನಾ ಮಧ್ಯೆ ತಗ್ಗದ ಹಬ್ಬದ ಅಬ್ಬರ

ಹುಬ್ಬಳ್ಳಿ,ನ14- ಕೊರೋನಾ ಕರಿನೆರಳನ್ನು ಪಕ್ಕಕ್ಕಿರಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲೀಗ ಎಲ್ಲೆಡೆ ದೀಪಗಳ ಹಬ್ಬ ದೀಪಾವಳಿಯ ಅಬ್ಬರದ ಮೆರುಗು ಉಧೃತವಾಗಿ ಹರಡಿಕೊಂಡಂತಿದೆ.
ಮಹಾನಗರದ ಪ್ರತಿ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಯ ಭರಾಟೆ ಮೇರುಸ್ಥಿತಿಯಲ್ಲಿದೆ.
ನಗರದ ದುರ್ಗದಬೈಲ, ಗಾಂಧಿ ಮಾರ್ಕೆಟ್, ಕೊಪ್ಪಿಕರ ರಸ್ತೆ, ಜನತಾಬಜಾರ್, ದಾಜಿಬಾನಪೇಟ, ಧಾರವಾಡದ ಸುಭಾಸ ರೋಡ ಮಾರುಕಟ್ಟೆ, ಅಕ್ಕೀಪೇಟೆ, ಗಾಂಧಿಚೌಕ, ಶಿವಾಜಿ ಚೌಕ ಮತ್ತಿತರ ಮಾರ್ಕೆಟ್‍ಗಳಲ್ಲಿ ವ್ಯಾಪಾರ ವಹಿವಾಟಿನ ರಂಗು ಝಗಮಗಿಸುತ್ತಿದೆ.
ಬಟ್ಟೆ-ಬರೆಗಳು, ತರಹೇವಾರಿ ಗೃಹೋಪಯೋಗಿ ಉಪಕರಣಗಳು, ಹೂವು ಹಣ್ಣುಗಳು, ನಾನಾ ವಿಧದ ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದ್ದರೆ ವಿಧ ವಿಧದ ಆಫರ್‍ಗಳು ಡಿಸ್ಕೌಂಟ್‍ಗಳೆಂಬ ಸಿಹಿ ಮಿಠಾಯಿಗಳಿಂದ ಗ್ರಾಹಕರ ಮನಸೆಳೆಯುವಿಕೆ ಭರ್ಜರಿಯಾಗೇ ನಡೆದಿದೆ.
ಇನ್ನು ಚಿನ್ನಾಭರಣ, ಹೊಸ ಕಾರು, ಸ್ಕೂಟರ್‍ಗಳ ಖರೀದಿ ಕಾರ್ಯವೂ ಜೋರಾಗಿ ನಡೆದಿದ್ದು ಕೊರೋನಾ ಹಾವಳಿ, ಲಾಕ್‍ಡೌನ್‍ದ ಪೆಟ್ಟಿನಿಂದ ಝೋಮು ಹಿಡಿದಂತಾಗಿದ್ದ ಚಿನ್ನಾಭರಣ ವ್ಯಾಪಾರಸ್ಥರು, ಆಟೋಮೊಬೈಲ್ ಡೀಲರ್‍ಗಳಲ್ಲಿ ಕೊಂಚ ಉತ್ಸಾಹದ ವಾತಾವರಣ ಮೂಡಿಸಿದಂತಿದೆ.
ಮಾರುಕಟ್ಟೆಯಲ್ಲಿ ಹೂವು ಹಣ್ಣುಗಳ ದರ ಮಾತ್ರ ಎಂದಿಗಿಂತ ಚುರುಕಾಗಿ ಏರಿಕೆ ಕಂಡಿದ್ದು ಬಡ ಹಾಗೂ ಮಧ್ಯಮ ವರ್ಗದವರು ಅಲ್ಪದರಲ್ಲೇ ತೃಪ್ತಿ ಕಾಣುವ ಸ್ಥಿತಿ ಕಂಡುಬರುತ್ತಿದೆ.
ಮಹಾನಗರದ ಪ್ರತಿಯೊಂದು ಪ್ರಮುಖ ರಸ್ತೆಗಳು, ವೃತ್ತಗಳು ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಅತ್ಯಂತ ವೀಪರಿತವಾಗಿದ್ದು ಕೆಲವೆಡೆಗಳಲ್ಲಿ ಸುಮಾರು ಹೊತ್ತು ಕಾಲ ಸಂಚಾರ ನಿಯಂತ್ರಣ ಸಾಧ್ಯವಾಗದೇ ಸಂಚಾರ ಪೊಲೀಸರು ಹರಸಾಹಸ ಪಡಬೇಕಾದ ಸ್ಥಿತಿಯಿದೆ.
ಮಾಸ್ಕ್ ಗೌಣ:
ಕೊರೋನಾ ಸೋಂಕು ತಡೆಗೆ ಅತ್ಯಗತ್ಯವಾಗಿರುವ ಮಾಸ್ಕ್ ಧರಿಸುವಿಕೆ ಮಾರುಕಟ್ಟೆಗಳಲ್ಲಿ ಗ್ರಾಹಕರು, ವ್ಯಾಪಾರಸ್ಥರು ಪಾಲಿಸುತ್ತಿರುವರಾದರೂ ಪ್ರತಿಶತ ನೂರರಷ್ಟಿಲ್ಲ.
ಹಬ್ಬದ ಅಬ್ಬರ…. ಜೇಬಿನ ಭಾರ ಖಾಲಿಯಾಗುವ ಚಿಂತೆ….. ಇತ್ಯಾದಿಗಳ ಮಧ್ಯೆ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್ ಧರಿಸದೇ ಜನ ವ್ಯಾಪಾರ, ವಹಿವಾಟು, ಖರೀದಿಯಲ್ಲಿ ಮುಳುಗಿದುದು ಕಂಡು ಬಂದಿತು.