ಕೊರೊನಾ ಮತ್ತೆ ಹೆಚ್ಚಳ ಜನರಲ್ಲಿ ಆತಂಕ

ನವದೆಹಲಿ,ನ.೨೧- ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಇಳಿಮುಖವಾಗಿ ತುಸು ನೆಮ್ಮದಿ ವಾತಾವರಣ ಮೂಡುತ್ತಿದ್ದಂತೆಯೇ ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಹೆಮ್ಮಾರಿ ಉಪಟಳ ಮತ್ತೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಷ್ಟೇಅಲ್ಲದೆ, ಒಂದೆರಡು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದರೆ ಮತ್ತೆ ವಾರಾಂತ್ಯ ಲಾಕ್ ಡೌನ್ ಜಾರಿಗೊಳಿಸಲು ಚಿಂತನೆ ನಡೆಸಿದೆ.
ವೈರಾಣು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್, ಹರಿಯಾಣ, ಮುಂಬೈನಲ್ಲಿ ಶಾಲೆಗಳ ಪುನರಾರಂಭವನ್ನು ಅಲ್ಲಿನ ರಾಜ್ಯಸರ್ಕಾರಗಳು ಮುಂದೂಡಿವೆ. ಅಲ್ಲದೆ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ದೆಹಲಿಗೆ ತೆರಳುವ ವಿಮಾನ ಮತ್ತು ರೈಲು ಸಂಚಾರವನ್ನು ಸ್ಥಗಿತಗೊಳಿಸಲು ಗಂಭೀರ ಚಿಂತನೆ ನಡೆಸಿದೆ.
ದೀಪಾವಳಿ ಹಬ್ಬದ ಬಳಿಕ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ರಾಜಧಾನಿ ದೆಹಲಿಯಲ್ಲೂ ಸೋಂಕು iತ್ತು ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶಗಳನ್ನು ಲಾಕ್‌ಡೌನ್ ಮಾಡುವ ಬಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಕೆಲವು ರಾಜ್ಯಗಳಿಗೆ ತಜ್ಞರ ತಂಡಗಳನ್ನು ಕಳುಹಿಸಿ ಸೋಂಕು ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮ ಹಾಗೂ ಮತ್ತಿತರ ವಿಚಾರಗಳ ವಿನಿಮಯ ಮಾಡಿಕೊಳ್ಳಲು ಮುಂದಾಗಿದೆ.
ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ೨ನೇ ಹಂತದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಭೀತಿ ಎದುರಾಗಿದೆ. ಸೋಂಕು ಹೆಚ್ಚಾದ ೪ ರಾಜ್ಯಗಳಿಗೆ ಉನ್ನತ ಮಟ್ಟದ ತಂಡಗಳನ್ನು ತಂಡಗಳನ್ನು ಕೇಂದ್ರ ಕಳುಹಿಸಿತ್ತು. ಈಗ ತಜ್ಞರ ತಂಡಗಳನ್ನು ಇತರ ರಾಜ್ಯಗಳಿಗೂ ಕಳುಹಿಸಿ ಸಾಂಕ್ರಾಮಿಕ ರೋಗ ನಿರ್ವಹಣೆಗೆ ಸ್ಥಳೀಯ ಆಡಳಿತದ ಜತೆಗೆ ಕೈಜೋಡಿಸಲಿದೆ.
ಈ ತಂಡಗಳು ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ ಪ್ರತಿ ದಿನ ದಾಖಲಾಗುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಕೇಂದ್ರಕ್ಕೆ ವರದಿ ರವಾನಿಸಲಿದೆ. ಇದರ ಜತೆಗೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮ, ಪರೀಕ್ಷೆ ಕಂಟೈನ್ಮೆಂಟ್ ವಲಯದಲ್ಲಿನ ಪರಿಸ್ಥಿತಿ ಕಣ್ಗಾವಲು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.
ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಣಿಪುರ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ತಜ್ಞರ ತಂಡಗಳನ್ನು ಕಳುಹಿಸುವುದಾಗಿ ಪ್ರಕಟಿಸಿತ್ತು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ನೇತೃತ್ವದ ಮೂವರು ಸದಸ್ಯರ ತಂಡ ಹರಿಯಾಣಕ್ಕೆ ಕಳುಹಿಸಲಾಗಿದೆ.
ಅರೋಗ್ಯ ಇಲಾಖೆ ಸದಸ್ಯ ಹಾಗೂ ನೀತಿ ಆಯೋಗದ ಮುಖ್ಯಸ್ಥ ಡಾ. ವಿ.ಕೆ. ಪಾಲ್ ರಾಜಸ್ಥಾನ ತಂಡದಲ್ಲಿದ್ದಾರೆ. ಗುಜರಾತ್ ತಂಡದಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧ್ಯಕ್ಷ ಡಾ. ಎಸ್.ಕೆ ಸಿಂಗ್ ಹಾಗೂ ಮಣಿಪುರದ ತಂಡದಲ್ಲಿ ಹೆಚ್ಚುವರಿ ಉಪ ಮಹಾನಿರ್ದೇಶಕ ಡಾ. ಎಲ್. ಸ್ವಸ್ಥಿ ಚರಣ್ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿದೆ.
ಈಗ ಇನ್ನೂ ಹಲವು ರಾಜ್ಯಗಳಿಗೆ ತಜ್ಞರ ತಂಡಗಳನ್ನು ನಿಯೋಜನೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಸೋಂಕನ್ನು ಪತ್ತೆಹಚ್ಚಿ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಸೋಂಕು ತಡೆಗೆ ಮುಂದಾಗಬೇಕೆಂದು ಸೂಚಿಸಿದೆ.
ಮತ್ತೊಂದೆಡೆ ಕರ್ನಾಟಕದಲ್ಲೂ ೨ನೇ ಹಂತದಲ್ಲಿ ಸೋಂಕು ಏರಿಕೆಯಾಗುವ ಆತಂಕ ಎದುರಾಗಿದೆ. ವಿರೋಧ ಮತ್ತು ಭೀತಿಯ ನಡುವೆಯೂ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೋಮೊ ಕಾಲೇಜುಗಳನ್ನು ಪುನಾರಂಭ ಮಾಡಲಾಗಿದೆ. ಆದರೆ, ಕಾಲೇಙು ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ.
ಕಾಲೇಜು ಆರಂಭವಾಗಿ ೪ ದಿನಗಳು ಕಳೆದಿದ್ದು, ರಾಜ್ಯದಲ್ಲಿ ಇದುವರೆಗೆ ೧೨೩ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಒಟ್ಟು ೧೬೩ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಶಿಕ್ಷಕರಿಗೂ ವೈರಾಣು ತಗುಲಿದೆ. ಇದು ಕೂಡ ರಾಜ್ಯಕ್ಕೆ ಎಚ್ಚರಿಕೆಯ ಸಂದೇಶವಾಗಿದೆ.
ಚಳಿಗಾಲ ಆರಂಭವಾಗಿದ್ದು, ಜನವರಿ ತಿಂಗಳಿನಲ್ಲಿ ಮತ್ತೆ ರಾಜ್ಯದಲ್ಲಿ ಕೊರೊನಾ ಸ್ಫೋಟಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಸೋಂಕು ವ್ಯಾಪಕವಾಗಿ ಹರಟದಂತೆ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದು, ಪ್ರತಿನಿತ್ಯ ೧ ಲಕ್ಷಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ
ಪರೀಕ್ಷೆಯ ಸಂಖ್ಯೆ ದಾಟಲಿದೆ.
ಮುಂದಿನ ತಿಂಗಳಿಂದ ಶಾಲಾ-ಕಾಲೇಜುಗಳನ್ನು ಪುನಾರರಂಭಿಸಲು ಶಿಕ್ಷಣ ಇಲಾಖೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ, ಆದರೆ, ಕೊರೊನಾ ಸೋಂಕು ಹೆಚ್ಚಳವಾಗುವ ಭೀತಿ ಎದುರಾಗಿರುವುದರಿಂದ ಶಾಲೆಗಳನು ಆರಂಭಿಸುವ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.