ಕೊರೊನಾ ಭೀತಿಯಲ್ಲಿ ಮಲೇರಿಯಾ ನಿರ್ಲಕ್ಷಿಸದಿರಿ

ಮೂಡುಬಿದಿರೆ, ಎ.೨೭: ಮುಂಬರುವ ೨೦೨೫ರ ವೇಳೆಗೆ ಮಲೇರಿಯಾಕ್ಕೆ ಮುಕ್ತಿ ಕಾಣಿಸುವ ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯದಂತೆ ‘ಶೂನ್ಯ ಮಲೇರಿಯಾ ನನ್ನಿಂದಲೇ’ ಎಂಬುದನ್ನು ಎಲ್ಲರೂ ಸ್ವಯಂ ರೂಢಿಸಿ ಪಾಲಿಸಬೇಕು. ಕೊರೊನಾದ ಭೀತಿಯಲ್ಲಿ ಅದಕ್ಕಿಂತಲೂ ಪ್ರಬಲವಾಗಿರುವ ಮಲೇರಿಯಾವನ್ನು ನಿವಾರಿಸಲು ಎಲ್ಲರೂ ಪಣತೊಡಬೇಕು’ ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಶಶಿಕಲಾ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಮಲೇರಿಯಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಕೆ. ಅವರು, ‘ಮಲೇರಿಯಾಕ್ಕೆ ಮೂಲಕಾರಣವಾದ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು; ನಿಂತ ನೀರಲ್ಲಿ ರೋಗಕಾರಕ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಅಂಥ ತಾಣಗಳನ್ನು ನಿವಾರಿಸಲು ಜನರು ಮುಂದಾಗಬೇಕು’ ಎಂದು ಹೇಳಿದರು. ಐಸಿಡಿಎಸ್ ಮೇಲ್ವಿಚಾರಕಿ ಶುಭ, ೩೫ ಮಂದಿ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖಾ ಸಿಬಂದಿ ಸಹಿತ ೫೦ ಮಂದಿ ಪಾಲ್ಗೊಂಡಿದ್ದರು.