ಕೊರೊನಾ ಭಯಬೇಡ, ಮುನ್ನೆಚ್ಚರಿಕೆ ಇರಲಿ


ಮರಿಯಮ್ಮನಹಳ್ಳಿ, ಮೇ.31: ಕೊರೋನಾ ರೋಗದ ಕುರಿತು ಭಯ ಬೇಡ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯಿಂದ ರೋಗಮುಕ್ತರಾಗಬಹುದು ಎಂದು ಹ.ಬೊ.ಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕೆ ನೇಮಿರಾಜ್ ನಾಯ್ಕ್ ಕೊರೋನಾ ರೋಗದ ಸೋಂಕಿತರಿಗೆ ತಿಳಿ ಹೇಳಿದರು.
ಅವರು ಭಾನುವಾರ ಮರಿಯಮ್ಮನಹಳ್ಳಿಗೆ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್‍ನ ಹಾಗೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕೊರೋನಾ ಸೋಂಕಿತರಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 7 ವರ್ಷ ಪೂರೈಸಿದ ಹಿನ್ನಲೆ ಸಂಭ್ರಮಾಚರಣೆಯ ಅಂಗವಾಗಿ ಹಾಲು, ಹಣ್ಣು ಹಾಗೂ ಬ್ರೆಡ್ ವಿತರಣೆ ಮಾಡಿ ಮಾತನಾಡಿದರು.
ರೋಗದ ಸೋಂಕಿತರು ಕುಟುಂಬದ ಹಾಗೂ ಗ್ರಾಮದವರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆವಹಿಸುವ ಉದ್ದೇಶದಿಂದ ಕೋವಿಡ್ ಕೇರ್ ಕೇಂದ್ರಗಳು ಪ್ರಾರಂಭಗೊಂಡಿದ್ದು, ಸೋಂಕಿತರು ನಿಮ್ಮ ಹತ್ತಿರದ ಕೋವಿಡ್ ಕೇಂದ್ರಗಳಲ್ಲಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದು ರೋಗಮುಕ್ತರಾಗಿ ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಹ.ಬೊ.ಹಳ್ಳಿ ಕ್ಷೇತ್ರದ ಬಿಜೆಪಿ ಎಸ್‍ಟಿ ಮೋರ್ಚ ಅಧ್ಯಕ್ಷ ಪೂಜಾರ ಪ್ರಕಾಶ, ಓಬಿಸಿ ಘಟಕದ ಅಧ್ಯಕ್ಷ ಕಿರಣ ಕುಮಾರ್, ಪಕ್ಷದ ಮುಖಂಡರಾದ ಡಿ ರಾಘವೇಂದ್ರ ಶೆಟ್ಟಿ, ಬಿಎಂಎಸ್ ಪ್ರಕಾಶ, ಶ್ರೀಕಾಂತ್, ರವಿಕಿರಣ್, ವೆಂಕಟೇಶ್, ಪ್ರಕಾಶ್ ನಾಯ್ಕ್, ತಾ.ಪಂ ಸದಸ್ಯ ರಾಜಣ್ಣ, ಓಬಜ್ಜ, ಪ್ರಕಾಶ್ ನಾಯ್ಕ್, ನಾಗಲಾಪುರ ಗ್ರಾ.ಪಂ ಅಧ್ಯಕ್ಷ ಶಂಕ್ರಯ್ಯ ಸ್ವಾಮಿ, ಬ್ಯಾಲಕುಂದಿ ಗ್ರಾಮದ ಸಿದ್ರಾಮಪ್ಪ, ಗಾಳೆಮ್ಮನಗುಡಿ ಗ್ರಾಮದ ಸಿ.ಡಿ ಯಲ್ಲಪ್ಪ, ಮಜ್ಗಿ ನಾಗರಾಜ, ಡಣಾಯಕನಕೆರೆ ಗ್ರಾ.ಪಂ ಸದಸ್ಯ ಗುಂಡಾ ಸ್ವಾಮಿ ಹಾಗೂ ಇತರರು ಇದ್ದರು.