ಕೊರೊನಾ: ಬಡವರಿಗೆ ದಿನಸಿ ಕಿಟ್ ವಿತರಿಸಿ, ಕಠಿಣ ಬೀಗಮುದ್ರೆ ಕ್ರಮ ಕೈಗೊಳ್ಳಿ; ರೈತ ಸೇನೆ ಆಗ್ರಹ

ಯಾದಗಿರಿ:ಮೇ.5: ಕೊರನಾ ಕಾರಣದಿಂದ ದಿನೇದಿನೇ ಸಾವು ನೋವುಗಳು ಹೆಚ್ಚಾಗುತ್ತಿರುವುದರಿಂದ ಸರಕಾರ ಎಚ್ಚೆತ್ತುಕೊಂಡು ಕಠಿಣ ನಿಯಮ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ್ ಅಧ್ಯಕ್ಷ ಮುದುಕಪ್ಪ ಚಾಮನಹಳ್ಳಿ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಅದರಲ್ಲೂ ರೂಪಾಂತರಿ ಕೊರೊನಾದ ಹಾವಳಿಗೆ ಕಂಗೆಟ್ಟಿರುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಬಡವರು ಕೂಲಿಕಾರರು ದಿಕ್ಕು ತೋಚದಂತಾಗಿದ್ದಾರೆ.
ಸರ್ಕಾರ ಕೂಡಲೇ ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ದವಸ ಧಾನ್ಯದ ದಿನಸಿ ಕಿಟ್ ವಿತರಣೆ ಮಾಡಿ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.
ಸದ್ಯ ವಿಧಿಸಲಾಗಿರುವ ಕೊರೊನಾ ಕಫ್ರ್ಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇ ಇರುವುದು ಎಲ್ಲೆಡೆ ಕಂಡುಬರುತ್ತಿದೆ. ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಬಾರ್ ಮತ್ತು ಮುಂತಾದ ಅಂಗಡಿಗಳು ಸಂಪೂರ್ಣ ಬಂದ್ ಮಾಡಬೇಕು.
ಆಮ್ಲಜನಕ ಕೊರತೆಯಿಂದ ದಿನೇದಿನೇ ಸಾವು ಹೆಚ್ಚಾಗುತ್ತಿರುವುದರಿಂದ ಆಗುತ್ತಿರುವ ಅನಾಹುತ ತಡೆಯಲು ಸೂಕ್ತ ಪರ್ಯಾಯ ಕ್ರಮ ಕೈಗೊಳ್ಳಬೇಕು ಸರಕಾರ ಎಚ್ಚೆತ್ತುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.