ಕೊರೊನಾ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ಅಗತ್ಯ : ಐಕೂರು

ಸೈದಾಪುರ:ಎ.28:ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಭಯ ಬೇಡ. ಅದನ್ನು ಎದುರಿಸಲು ಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಸಾಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೌಲಾಲಿ ಐಕೂರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೊರೊನಾ ಕಾರ್ಯಪಡೆಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಕಂದಾಯ ಇಲಾಖೆ,ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪ್ರತಿ ಗ್ರಾಮದ ಒಬ್ಬ ಸದಸ್ಯರನ್ನೊಳಗೊಂಡ ಒಂದು ತಂಡವಿರುತ್ತದೆ. ಈ ತಂಡವು ಪ್ರತಿಯೊಂದು ಗ್ರಾಮಗಳಲ್ಲಿ ಮತ್ತು ತಮ್ಮ ಸುತ್ತಮುತ್ತ 45 ವರ್ಷ ವಯಸ್ಸು ಮೇಲ್ಪಟ್ಟ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಇರುವ ಭಯವನ್ನು ನಿವಾರಿಸಿ, ಜಾಗೃತಿಯನ್ನು ಮೂಡಿಸಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ದೊರೆಯುವ ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಲು ಮನವೊಲಿಸಬೇಕು. ಅಲ್ಲದೇ ಅವರಿಗೆ ಆರೋಗ್ಯ ಇಲಾಖೆ ಸೂಚಿಸಿದ ಮುನ್ನಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತ್ಯಪ್ರಕಾಶ ಮಾತನಾಡಿ, ಕೊರೊನಾ ವೈರಸ್‍ನ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗವಾಗಿದೆ. ಆದ್ದರಿಂದ ಜನರು ಗಾಬರಿ, ಭಯ ಪಡದೇ ಪ್ರತಿಯೊಬ್ಬರು ಕೂಡ ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಬೇಕು. ಸುರಕ್ಷಿತ ದೈಹಿಕ ಅಂತರವನ್ನು ಕಾಪಾಡಬೇಕು. ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು. ಬಿಸಿ ನೀರನ್ನು ಹೆಚ್ಚಾಗಿ ಕುಡಿಯಬೇಕು. ಮೈ-ಕೈ ನೋವು, ಉಸಿರಾಟ, ಆಯಾಸ, ಜ್ವರ, ಶೀತ, ನೆಗಡಿ, ತಲೆನೋವು ಇಂತಹ ಸಮಸ್ಯೆಗಳ ಕಂಡು ಬಂದರೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ಜನರು ನಿರ್ಲಕ್ಷ್ಯ ಮಾಡಬಾರದು. ಇದರಿಂದ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಮೇ-01 ರಿಂದ ಲಸಿಕೆಯನ್ನು ನೀಡಲು ಪ್ರಾರಂಭ ಮಾಡುತ್ತದೆ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳಪ್ಪ ಅರಿಕೇರಿ, ಉಪಾಧ್ಯಕ್ಷ ನೇತ್ರಾವತಿ ತಿಮ್ಮಾರೆಡ್ಡಿ, ಕಂದಾಯ ಇಲಾಖೆಯ ಪ್ರತಿನಿಧಿ, ಗ್ರಾ.ಪಂ ಸದಸ್ಯರು, ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರಿದ್ದರು.