ಕೊರೊನಾ ಬಗ್ಗೆ ತಾತ್ಸಾರ ಬೇಡ

ಮಧುಗಿರಿ, ನ. ೧೩- ತಾಲ್ಲೂಕಿನ ಜನತೆ ಕೊರೊನಾ ಬಗ್ಗೆ ತಾತ್ಸಾರದ ಮನೋಭಾವ ಹೊಂದಿದ್ದು, ಹಬ್ಬದ ಸಂದರ್ಭದಲ್ಲಿ ಜನ ಸಂಪರ್ಕದಿಂದಾಗಿ ಮತ್ತೆ ಹೆಚ್ಚಾಗುವ ಸಂಭವವಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಡಾ.ಜಿ. ವಿಶ್ವನಾಥ್ ತಿಳಿಸಿದರು.
ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರ, ಇನ್ಫೋಸಿಸ್ ಫೌಂಡೇಷನ್, ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಚಿನ್ಮಯಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರಂಭದಲ್ಲಿ ಕೊರೊನಾ ಸೊಂಕಿನ ವಿರುದ್ದದ ಹೋರಾಟದಲ್ಲಿ ತಾಲ್ಲೂಕಿನ ಜನತೆ ಉತ್ತಮ ಸಹಕಾರ ನೀಡಿದ್ದು, ನಂತರದ ದಿನಗಳಲ್ಲಿ ಕೆಲಸದ ಒತ್ತಡದಲ್ಲಿ ತಾತ್ಸಾರ ಮನೋಭಾವ ಪ್ರದರ್ಶಿಸುತ್ತಿರುವುದು ಬೇಸರದ ಸಂಗತಿ. ಯುವ ಜನತೆಯ ದೇಹದಲ್ಲಿ ಕೊರೊನಾ ಸೊಂಕಿನ ವಿರುದ್ದ ಹೋರಾಡುವ ಶಕ್ತಿ ಹೆಚ್ಚಾಗಿರಬಹುದು. ಆದರೆ ನಮ್ಮನ್ನೇ ನಂಬಿಕೊಂಡು ಮನೆಯಲ್ಲಿರುವ ಹಿರಿಯರು ಮತ್ತು ಮಕ್ಕಳಿಗೆ ಇದರಿಂದ ಬಹಳಷ್ಟು ತೊಂದರೆಯುಂಟಾಗಲಿದ್ದು, ಎಚ್ಚರಿಕೆ ತಪ್ಪಿದಲ್ಲಿ ಮತ್ತೆ ನಮ್ಮ ಮೇಲೆ ದಾಳಿ ಮಾಡಲಿದೆ. ಆದ್ದರಿಂದ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ಬೀದಿ ನಾಟಕಗಳು ಜನರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಲಿದ್ದು, ಇದೊಂದು ಉತ್ತಮ ಕಾರ್ಯಕ್ರಮ ಇದನ್ನು ಅಯೋಜಿಸಿದ ಎಲ್ಲಾ ಸಂಘಟನೆಗಳಿಗೂ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ, ಮಾಜಿ ಅಧ್ಯಕ್ಷ ಗೋವಿಂದರಾಜು, ಮುಖ್ಯಾಧಿಕಾರಿ ಅಮರ್ ನಾರಾಯಣ್, ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ, ರಾಮಕೃಷ್ಣ ಆಶ್ರಮದ ಪ್ರಕಾಶ್, ಚಿನ್ಮಯಿ ಸಂಸ್ಥೆಯ ಸತ್ಯ ಲೋಕೇಶ್, ಮುಖಂಡ ಎಂ.ಜಿ.ಉಮೇಶ್, ಆರೋಗ್ಯ ನಿರೀಕ್ಷಕ ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.