‘ಕೊರೊನಾ’ ಪ್ರಾಣಹಾನಿಗೆ ಕಾಂಗ್ರೇಸ್ ಕಾರಣ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ
ಪುತ್ತೂರು, ಮೇ ೨೦- ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಅಪಾರ ಪ್ರಮಾಣದಲ್ಲಿ ಸಂಭವಿಸುತ್ತಿರುವ ಪ್ರಾಣ ಹಾನಿಗೆ ಕಾಂಗ್ರೇಸ್ ಪಕ್ಷವೇ ನೇರ ಕಾರಣವಾಗಿದೆ. ಲಸಿಕೆ ಬಗ್ಗೆ ಅಪಪ್ರಚಾರ ನಡೆಸುವ ಮೂಲಕ ಜನತೆ ಲಸಿಕೆ ಪಡೆಯಲು ಹಿಂಜರಿಕೆ ಉಂಟು ಮಾಡಿದ ಕಾಂಗ್ರೇಸ್ ಪಕ್ಷ ದೇಶಭಕ್ತ ಪಕ್ಷವೆಂದು ಹೇಳಿಕೊಂಡು ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಪುತ್ತೂರು ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ವಿಜ್ಞಾನಿಗಳಿಗೆ ಪ್ರೇರಣೆ ನೀಡಿ ಕೋವಿಡ್ ಲಸಿಕೆ ಆವಿಷ್ಕಾರ ಮಾಡಲಾಯಿತು. ಆದರೆ ಇದರ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದ ಕಾಂಗ್ರೆಸ್, ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಲೇವಡಿ ಮಾಡಿತು. ರಾಹುಲ್ ಗಾಂಧಿ, ಸಿದ್ಧರಾಮಯ್ಯ ಮುಂತಾದ ನಾಯಕರೆಲ್ಲ ಲಸಿಕೆಯನ್ನು ಟೀಕೆ ಮಾಡಿ ಜನರನ್ನು ನಿರುತ್ತೇಜನಗೊಳಿಸಿದರು. ಇದರಿಂದ ಆರಂಭದಲ್ಲಿ ಜನ ಲಸಿಕೆ ಪಡೆಯಲು ಮುಂದೆ ಬರಲೇ ಇಲ್ಲ. ಇವತ್ತು ಸಂಭವಿಸುತ್ತಿರುವ ಪ್ರಾಣ ಹಾನಿಗಳಿಗೆ ಇದೇ ಕಾರಣ. ಹೀಗಾಗಿ ಕೋವಿಡ್ ಮರಣ ಸರಣಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಅವರು ಆಪಾದಿಸಿದರು.
ಹಿಂದೆ ಲಸಿಕೆ ಪಡೆಯದಂತೆ ಜನರನ್ನು ದೂರ ಮಾಡಿದ ಕಾಂಗ್ರೆಸ್ ನಾಯಕರೆಲ್ಲಾ ಇಂದು ಲಸಿಕೆ ಪಡೆದುಕೊಂಡಿದ್ದಾರೆ. ಈಗ ಲಸಿಕೆ ಇಲ್ಲ ಎಂದು ಬೀದಿ ರಂಪ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರ ಕೊರೊನಾ ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಂಬಿಸಲು ಅದು ಟೂಲ್ ಕಿಟ್ ತಂತ್ರಗಾರಿಕೆ ಮಾಡುತ್ತಿದೆ. ಶವ ಸುಡುವ, ನದಿಯಲ್ಲಿ ಶವಗಳು ತೇಲುವ, ಆಕ್ಸಿಜನ್ ಅಭಾವ ಇರುವ ದೃಶ್ಯಗಳನ್ನು ಚಿತ್ರೀಕರಿಸಿ ಅವು ಸೋಷಿಯಲ್ ಮೀಡಿಯಾಗಳಲ್ಲಿ ವಿಜೃಂಭಿಸುವಂತೆ ಮಾಡುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಕುಂಭಮೇಳವು ಕೊರೊನಾ ಪಾಲಿಗೆ ಸೂಪರ್ ಸ್ಪ್ರೆಡ್ಡರ್ ಆಗಿದೆ. ದೇಶದ ನೂತನ ಸಂಸತ್ ಭವನವು ಮೋದಿ ಅವರ ಮನೆ ಎಂಬುದೆಲ್ಲ ಅಪಪ್ರಚಾರ ಮಾಡಲಾಗಿದೆ. ಕಾಂಗ್ರೆಸ್ ಇಂಥ ಹೀನ ಕೃತ್ಯವನ್ನು ಕೈಬಿಟ್ಟು ರಾಷ್ಟ್ರೀಯ ಸಂಕಟವನ್ನು ಎದುರಿಸುವಲ್ಲಿ ಸರ್ಕಾರದ ಜತೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಶಾಸಕರು ಸೇರಿ ೧೦೦ ಕೋಟಿ ರೂ. ಒಟ್ಟು ಮಾಡಿ ಲಸಿಕೆ ಅಭಿಯಾನಕ್ಕೆ ನೀಡುವುದಾಗಿ ಹೇಳಿ ಆ ಪಕ್ಷದ ನಾಯಕರು ದೊಡ್ಡಮಟ್ಟದ ಪ್ರಚಾರ ಪಡೆದುಕೊಂಡಿದ್ದಾರೆ. ಆದರೆ ಅವರು ಸರ್ಕಾರ ಶಾಸಕರಿಗೆ ನೀಡುವ ಮೊತ್ತವನ್ನು ನೀಡುವುದು. ಇದರಲ್ಲಿ ಕಾಂಗ್ರೆಸ್‌ನ ಕೀರ್ತಿ ಏನಿದೆ? ಬಿಜೆಪಿ ಸಂಸದರು ತಮ್ಮ ನಿಧಿಯಿಂದ ೨.೫ ಕೋಟಿ ರೂ.ಗಳನ್ನು ಲಸಿಕೆ ಅಭಿಯಾನಕ್ಕೆ ನೀಡಲಿದ್ದಾರೆ. ಈ ರೀತಿ ಪ್ರಚಾರ ಪಡೆಯುವ ಬದಲು ಕಾಂಗ್ರೆಸಿಗರು ತಾವೇ ಸಂಗ್ರಹಿಸಿ ನೀಡಲಿ ಎಂದು ಸವಾಲು ಹಾಕಿದರು. ಬ್ಲ್ಯಾಕ್ ಫಂಗಸ್ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದವರು ಹೇಳಿದರು.
ಗೋಷ್ಟಿಯಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಉಪಸ್ಥಿತರಿದ್ದರು.