ಕೊರೊನಾ : ಪೌರ ಕಾರ್ಮಿಕರ ಸೇವೆ ಶ್ಲಾಘನೆ

ರಾಯಚೂರು.ಮಾ.೨೧- ಕೊರೊನಾ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿತ್ತೆಂದು ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ ಮುಕ್ತಕಂಠದಿಂದ ಶ್ಲಾಘೀಸಿದರು.
ನಿನ್ನೆ ಸಂಜೆ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಪೌರ ಕಾರ್ಮಿಕರ ಸೇವೆಯನ್ನು ಶ್ಲಾಘಿಸಿದ ಅವರು, ಕೊರೊನಾ ಸಂದರ್ಭದಲ್ಲಿ ಅತ್ಯಂತ ಮಾನವೀಯತೆಯಿಂದ ಮತ್ತು ಜೀವದ ಅಂಗು ತೊರೆದು ಕೆಲಸ ನಿರ್ವಹಿಸಿದ ಪೌರ ಕಾರ್ಮಿಕರು ನಿಜವಾದ ವಾರಿಯರ್ಸ್ ಎಂದರು. ಕೊರೊನಾ ಸೋಂಕಿತ ವ್ಯಕ್ತಿ ಮತ್ತು ಮನೆಗಳ ಹತ್ತಿರ ಹೋಗಲು ಹೆದರುವ ಕಾಲದಲ್ಲಿ ಪೌರ ಕಾರ್ಮಿಕರು ಅವರ ಮನೆಗಳಿಗೆ ತೆರಳಿ, ಸ್ಯಾನಿಟೈಸೇಷನ್ ಮಾಡುವ ಮೂಲಕ ಜನರ ಸೇವೆ ಮಾಡಿದ್ದಾರೆ. ಜೈ ಕಿಸಾನ್ ಜೈ ಜವಾನ್ ಎಂಬ ಘೋಷಣೆಗಳೊಂದಿಗೆ ಜೈ ಪೌರ ಕಾರ್ಮಿಕ ಎನ್ನುವುದನ್ನು ಸೇರಿಸುವುದು ಅಗತ್ಯವಾಗಿದೆ.
ಇವರ ಈ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಲೇಬೇಕು. ಪೌರ ಕಾರ್ಮಿಕರ ಕಾಳಜಿಯೂ ನಿಜವಾಗಿಯೂ ಸ್ಮರಣೀಯವಾಗಿದೆ. ನನ್ನ ಮಿತ್ರರೊಬ್ಬರಿಗೆ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಯಾರು ಅವರ ಮನೆ ಬಳಿ ಸುಳಿಯುತ್ತಿರಲಿಲ್ಲ. ಆದರೆ, ಪೌರ ಕಾರ್ಮಿಕರು ಮನೆಗೆ ತೆರಳಿ, ಸ್ಯಾನಿಟೈಸ್ ಮಾಡಿ, ಸೇವೆ ಮಾಡಿದ್ದರು ಎಂದು ಹೇಳಿದರು. ಒಟ್ಟಾರೆಯಾಗಿ ಪೌರ ಕಾರ್ಮಿಕರು ಕೋವಿಡ್‌ನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆಂದು ಹೇಳಿದರು.
ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಈ.ವಿನಯಕುಮಾರ, ಪೌರಾಯುಕ್ತರಾದ ವೆಂಕಟೇಶ ಹಾಗೂ ತಹಶೀಲ್ದಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.