ಕೊರೊನಾ ಪರೀಕ್ಷೆ ನಿರ್ವಹಣೆ ಬದಲಾವಣೆ

ಬೆಂಗಳೂರು,ಆ.೨೫- ಕೊರೊನಾದ ಸಂಭಾವ್ಯ ೩ನೇ ಅಲೆಯನ್ನು ತಡೆಯಲು ರಾಜ್ಯಸರ್ಕಾರ ಈಗಾಗಲೇ ಬಿಗಿಕ್ರಮಗಳನ್ನು ಕೈಗೊಂಡಿದ್ದು, ಕೊರೊನಾ ಪರೀಕ್ಷೆ ನಿರ್ವಹಣೆಯಲ್ಲೂ ನೂತನ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ.
ಈಗಿನ ಕೊರೊನಾ ಪರೀಕ್ಷೆಯ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ೩ನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ೧೮ ವರ್ಷ ಒಳಗಿನ ಮಕ್ಕಳಿಗೂ ಕೊರೊನಾ ಪರೀಕ್ಷೆಗೆ ಒಳಪಡಿಸುವುದರ ಜತೆಗೆ ಜಿಲ್ಲಾವಾರು ಪರೀಕ್ಷಾ ಗುರಿಯನ್ನು ಏರಿಸಲಾಗಿದೆ. ಪ್ರತಿದಿನ ನಡೆಸುವ ಕೊರೊನಾ ಪರೀಕ್ಷೆಯಲ್ಲಿ ಕನಿಷ್ಠ ಶೇ. ೧೦ ರಷ್ಟು ಕೊರೊನಾ ಪರೀಕ್ಷೆಯನ್ನು ೧೮ ವರ್ಷ ಕೆಳಗಿನ ಮಕ್ಕಳಿಗೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಸಂಬಂಧ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ಕೊರೊನಾ ಸಂಭಾವ್ಯ ೩ನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಪರೀಕ್ಷೆ ನಿರ್ವಹಣೆಗೆ ನೂತನ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜಿಲ್ಲಾವಾರು ಕೊರೊನಾ ಪರೀಕ್ಷಾ ಗುರಿಯನ್ನು ೧.೭೫ ಲಕ್ಷಕ್ಕೆ ಏರಿಸಲಾಗಿದೆ ಎಂದೂ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಪ್ರತಿದಿನ ನಡೆಯುವ ಕೊರೊನಾ ಪರೀಕ್ಷೆಯಲ್ಲಿ ಶೇ. ೧೦ ರಷ್ಟು ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಲು ಸೂಚನೆ ನೀಡಲಾಗಿದೆ. ಹಾಗೆಯೇ, ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ಮೇಲೆ ನಿಗಾ ವಹಿಸಲು ಒಟ್ಟಾರೆ ಪರೀಕ್ಷೆಗಳಲ್ಲಿ ಶೇ. ೫೦ ರಷ್ಟು ಪರೀಕ್ಷೆಗಳನ್ನು ತಾಲ್ಲೂಕು ಕೇಂದ್ರದ ಹೊರಗೆ ನಡೆಸಲು ಸೂಚಿಸಲಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ಪಾಸಿಟಿವಿಟಿ ದರ ಶೇ. ೫ ಕ್ಕಿಂತ ಕಡಿಮೆ ಇರುವ ಗ್ರಾಮಪಂಚಾಯ್ತಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ರೋಗರಹಿತ ಲಕ್ಷಣ ಪ್ರಕರಣಗಳನ್ನು ಪೂಲಿಂಗ್ ಮೂಲಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಸಂಭಾವ್ಯ ೩ನೇ ಅಲೆಯನ್ನು ತಡೆಯಲು ಸರ್ಕಾರ ಪರೀಕ್ಷಾ ನಿರ್ವಹಣೆಯಲ್ಲಿ ಕಾರ್ಯತಂತ್ರಗಳನ್ನು ಬದಲಿಸಿದ್ದು, ಅದರಂತೆ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈ ಸುತ್ತೋಲೆಯಲ್ಲಿ ಕೇರಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮತ್ತು ಅಂತರ್‌ರಾಜ್ಯ ಗಡಿಗಳಿಂದ ಆಗಾಗ್ಗೆ ನಿಯಮಿತವಾಗಿ ಭೇಟಿ ನೀಡುವ ಗ್ರಾಮಗಳಲ್ಲಿ ತೀವ್ರತರವಾದ ಪರೀಕ್ಷೆಗಳನ್ನು ನಡೆಸಬೇಕು. ೧೫ ರಿಂದ ೧೮ ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಲಭ್ಯ ಇಲ್ಲದೆ ಇರುವುದರಿಂದ ಶೀತ, ಜ್ವರ ಮತ್ತು ಕೆಮ್ಮು ರೋಗ ಲಕ್ಷಣದ ಮಕ್ಕಳನ್ನು ಕಡ್ಡಾಯವಾಗಿ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ (ಆರ್‌ಎಟಿ)ಗೆ ಒಳಪಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿರುವುದಾಗಿ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಆರ್‌ಪಿಟಿಸಿಆರ್ ಗುರಿಯಲ್ಲಿ ಪ್ರಸ್ತುತ ಪಾಸಿಟಿವಿಟಿ ದರ ಶೇ. ೫ಕ್ಕಿಂತ ಹೆಚ್ಚಿರುವ ಜಿಲ್ಲೆಗಳನ್ನೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರ್‌ಟಿಪಿಸಿಆರ್ ಗುರಿಯಲ್ಲಿ ಪ್ರಮುಖವಾಗಿ ೧೫ ಪ್ರಾಥಮಿಕ/ಕೌಟುಂಬಿಕ ಸಂಪರ್ಕಿತರ ಪರೀಕ್ಷೆ ಹಾಗೂ ರೋಗ ಲಕ್ಷಣರಹಿತ ಪ್ರಕರಣಗಳ ಮಾದರಿ ಪರೀಕ್ಷೆಗೂ ಸೂಚನೆ ನೀಡಲಾಗಿದೆ ಎಂದವರು ಹೇಳಿದ್ದಾರೆ.

  • ಸಂಭಾವ್ಯ ೩ನೇ ಅಲೆ ತಡೆಯಲು ಕೊರೊನಾ ಪರೀಕ್ಷೆಯಲ್ಲಿ ಹೊಸ ಕಾರ್ಯತಂತ್ರ
  • ಪ್ರತಿದಿನದ ಪರೀಕ್ಷೆಯಲ್ಲಿ ಶೇ. ೧೦ ರಷ್ಟು ಪರೀಕ್ಷೆ ೧೮ ವರ್ಷಕ್ಕಿಂದ ಮಕ್ಕಳ ಕೊರೊನಾ ತಪಾಸಣೆ ಕಡ್ಡಾಯ
  • ಗ್ರಾಮಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಹೆಚ್ಚಿನ ನಿಗಾ
  • ತಾಲ್ಲೂಕು ಕೇಂದ್ರಗಳ ಹೊರಗಿನ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆಗೆ ಸೂಚನೆ
  • ಗಡಿ ಭಾಗದ ಹಳ್ಳಿಗಳಲ್ಲಿ ನಿಯಮಿತ ಪರೀಕ್ಷೆಗೆ ಸೂಚನೆ