ಕೊರೊನಾ ಪರೀಕ್ಷೆ ಗರ್ಭಿಣಿಯರ ನಿರ್ಲಕ್ಷ್ಯ; ಸರ್ಕಾರಿ ಆಸ್ಪತ್ರೆ ಸಿಬಂದಿ ವಿರುದ್ಧ ಗಂಭೀರ ಆರೋಪ

ಪುತ್ತೂರು, ಎ.೨೮- ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಕೊರೊನಾ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರ ಬಗ್ಗೆ ಸರ್ಕಾರಿ ಆಸ್ಪತ್ರೆಯ ಸಿಬಂದಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಪುತ್ತೂರು ತಾಪಂ ಸಭೆಯಲ್ಲಿ ವ್ಯಕ್ತವಾಯಿತು.
ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಾಮಾನ್ಯ ಸಭೆ ಮಂಗಳವಾರ ನಡೆಯಿತು.
ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿ ಪರೀಕ್ಷೆ, ಸ್ಕ್ಯಾನಿಂಗ್ ಇತ್ಯಾದಿ ಮಾಡಿಸಿಕೊಳ್ಳುತ್ತಿರುವವರು ಕೋವಿಡ್ ಪರೀಕ್ಷೆಗೆಂದು ಸರ್ಕಾರಿ ಆಸ್ಪತೆಗೆ ಬಂದಾಗ ಇಲ್ಲಿನ ಸಿಬ್ಬಂದಿಗಳು ಉಡಾಫೆಯಾಗಿ ವರ್ತಿಸುತ್ತಿದ್ದಾರೆ. ನಿಮಗೆ ಹೆರಿಗೆ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆ ಬೇಕು. ಕೊರೊನಾ ತಪಾಸಣೆಗೆ ಮಾತ್ರ ಇಲ್ಲಿ ಬಂದು ಅವಸರ ಮಾಡುತ್ತೀರಿ ಎಂದು ಹಂಗಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಸದಸ್ಯ ಹರೀಶ್ ಬಿಜತ್ರೆ ವಿಷಯ ಪ್ರಸ್ತಾಪ ಮಾಡಿದರು.
ಈ ಬಗ್ಗೆ ಮಾತನಾಡಿದ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ‘ಇದು ಅಕ್ಷಮ್ಯ’ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಅವರಿಗೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಉತ್ತರಿಸಿ ಬಂದವರೆಲ್ಲರಿಗೂ ತಪಾಸಣೆ ಮಾಡ್ತೀನಿ. ಆರ್‌ಟಿಪಿಸಿಆರ್ ಪರೀಕ್ಷೆ ಮಾಡ್ತೀವಿ. ಕೆಲವೊಮ್ಮೆ ಕಿಟ್ ಅಭಾವವಿದ್ದಾಗ ತಪಾಸಣೆ ವಿಳಂಬವಾಗಿರಬಹುದು. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ವೆಂಟಿಲೇಟರ್‌ಗಳಿದ್ದು, ಎಲ್ಲವೂ ಚೆನ್ನಾಗಿ ಕೆಲಸ ಮಾಡುತ್ತಿವೆ. ಜಿಲ್ಲೆಗೆ ಕೋವಿಶೀಲ್ಡ್ ಲಸಿಕೆ ಮಾತ್ರ ಬರುತ್ತಿದೆ. ಕೊವ್ಯಾಕ್ಸಿನ್ ಬರುತ್ತಿಲ್ಲ. ಮಂಗಳೂರಿನಿಂದ ಲಸಿಕೆ
ಬಂದ ಹಾಗೆ ನಾವು ಕೊಡುತ್ತೇವೆ. ಸ್ಟಾಕ್ ಖಾಲಿಯಾದಾಗ ಏನೂ ಮಾಡಲಾಗದು. ೨ ದಿನಗಳ ಹಿಂದೆ ೫೦೦ ಲಸಿಕೆ ಬಂದಿತ್ತು. ಅದು ಮುಗಿದಿದೆ. ಇವತ್ತು ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಅವಿಭಜಿತ ತಾಲೂಕಿನಲ್ಲಿ ೩೧೯೯ ಕೊರೊನಾ ಪ್ರಕರಣ
ಕಡಬ-ಪುತ್ತೂರು ಅವಿಭಜಿತ ತಾಲೂಕಿನ ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವಿಭಜಿತ ಪುತ್ತೂರು ತಾಲೂಕಿಗೆ ಈಗಿನ ಬೇಡಿಕೆ ಪ್ರಕಾರ ವಾರಕ್ಕೆ ೧೩ ಸಾವಿರ ಕೋವಿಡ್ ಲಸಿಕೆ ಬೇಕಾಗುತ್ತಿದೆ. ೬ ಸಾವಿರ ಮಾತ್ರ ಬರುತ್ತಿದೆ.
ಕೊರೊನಾ ಎರಡನೇ ಅಲೆ ಆರಂಭಗೊಂಡ ಬಳಿಕ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಒಟ್ಟು ೩೧೯೯ ಪ್ರಕರಣಗಳು ಬೆಳಕಿಗೆ ಬಂದಿವೆ. ಇವರಲ್ಲಿ ೨೯೫೭ ಮಂದಿ ಪೂರ್ಣ ಗುಣಮುಖರಾಗಿದ್ದಾರೆ. ಪ್ರಸ್ತುತ ೯೦ ಪ್ರಕರಣಗಳು ಸಕ್ರಿಯವಾಗಿವೆ. ಸೋಮವಾರ ೧೭ ಪ್ರಕರಣಗಳು ವರದಿಯಾಗಿವೆ. ಬಹುತೇಕ ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಬಂದರೂ ಅಂಥವರು ಕೂಡ ಗುಣಮುಖರಾಗಿದ್ದಾರೆ ಎಂದರು.
ಮೆಡಿಕಲ್‌ಗಳಲ್ಲಿ ಸಾಮಾನ್ಯ ಶೀತ ಮತ್ತು ಜ್ವರಕ್ಕೆ ಮಾತ್ರೆ ಸಿಗುವಂತಿರಬೇಕು ಎಂದು ಸದಸ್ಯ ರಾಮ ಪಾಂಬಾರ್ ಹೇಳಿದರು. ಜನೌಷಧಿ ಕೇಂದ್ರ ನಡೆಸುತ್ತಿರುವ ಸದಸ್ಯ ಶಿವರಂಜನ್ ಮಾತನಾಡಿ, ವೈದ್ಯರ ಚೀಟಿ ಇಲ್ಲದೆ ಯಾವ ಮಾತ್ರೆಗಳನ್ನೂ ಮೆಡಿಕಲ್‌ನಲ್ಲಿ ನೇರವಾಗಿ ನೀಡುವಂತಿಲ್ಲ. ಹಾಗೆ ನೀಡುವುದು ಕಾನೂನು ಬಾಹಿರ ಎಂದರು. ಕೊರೊನಾ ಬರುವ ಮುಂಚೆ ಧಾರಾಳವಾಗಿ ಸಿಗುತ್ತಿತ್ತಲ್ಲವೇ ಎಂದು ರಾಮ ಪಾಂಬಾರ್ ಪ್ರಶ್ನಿಸಿದರು. ಕೊರೊನೊ ಮುಗಿದ ಮೇಲೂ ಸಿಗಬಹುದು. ಈಗ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳೋಣ ಎಂದು ಸಭಾಧ್ಯಕ್ಷರು ಹೇಳಿದರು.
ಕೋವಿಡ್ ನಿಯಮಾವಳಿ ಇರುವ ಕಾರಣ ತಾಪಂ ಸಭೆಯನ್ನು ೨ ಕಂತುಗಳಲ್ಲಿ ನಡೆಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನಲೆಯಲ್ಲಿ ಈ ಕ್ರಮ ಅನುಸರಿಸಲಾಯಿತು. ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ತಹಸೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿದ್ದರು.