ಕೊರೊನಾ ಪರಿಸ್ಥಿತಿ ರಾಜ್ಯಪಾಲರಿಗೆ ಮಾಹಿತಿ ನೀಡಿದ ಡಿಸಿಎಂ

ಬೆಂಗಳೂರು, ಮೇ.27- ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಮತ್ತು ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿಎನ್.‌ಅಶ್ವತ್ಥ ನಾರಾಣ,ಇಂದು ರಾಜ್ಯಪಾಲ ವಿ.ಆರ್ .ವಾಲಾ ಅವರನ್ನು ‌ಭೇಟಿ ಮಾಡಿ ಮಾಹಿತಿ‌ ನೀಡಿದರು.
ಮತ್ತೋರ್ವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ರಾಜಭವನಕ್ಕೆ ತೆರಳಿ ಸೋಂಕು ತಡೆಗೆ ಲಾಕ್‌ಡೌನ್‌, ಲಸಿಕೆ ಅಭಿಯಾನ, ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಸಿಬ್ಬಂದಿ ನೇಮಕ ಸೇರಿದಂತೆ ಸರಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ವಿವರಿಸಿದರು.
ಲಾಕ್‌ಡೌನ್‌ ಜಾರಿ ಮಾಡಿದ ಬಳಿಕ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಕರಣ ಕಡಿಮೆಯಾಗುವುದರ ಜತೆಗೆ ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೆ 45 ವರ್ಷ ಮೀರಿದ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡುವ ಕಾರ್ಯ ನಡೆದಿದೆ. ರಾಜ್ಯಾದ್ಯಂತ ಆಮ್ಲಜನಕ, ಔಷಧಿ, ರೆಮಿಡಿಸಿವಿರ್‌ ಕೊರತೆಯನ್ನು ನೀಗಿಸಲಾಗಿದೆ ಎಂದು ರಾಜ್ಯಪಾಲರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕಪ್ಪು ಶಿಲೀಂದ್ರ ಬಗ್ಗೆಯೂ ವಿವರ ನೀಡಿದ ಡಿಸಿಎಂ, ಈ ಕಾಯಿಲೆಗೆ ಔಷಧಿ ಕೊರತೆ ನೀಗಿಸಲು ಕ್ರಮಕೈಗೊಂಡಿರುವುದನ್ನು ರಾಜ್ಯಾಪಾಲರ ಗಮನಕ್ಕೆ ತಂದಿದ್ದಾರೆ.