ಕೊರೊನಾ ನಿರ್ವಹಿಸುವಲ್ಲಿ ಶಾಸಕರು ವಿಫಲ – ಆರೋಪ

ದೇವದುರ್ಗ.ಜೂ.೦೯- ಮಹಾಮಾರಿ ಕೊರೊನಾ ಎರಡನೇ ಅಲೆ ತಾಲೂಕಿನಲ್ಲಿ ವಿಪರೀತವಾಗಿ ಹೆಚ್ಚಾಗಿದ್ದು, ಅದನ್ನು ಸಮರ್ಥವಾಗಿ ಎದುರಿಸುವಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಆರೋಪಿಸಿದರು.
ಅವರಿಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲೂಕಿನಲ್ಲಿ ಕರೊನಾ ಪ್ರಥಮ ಹಾಗೂ ಎರಡನೇ ಅಲೆಯಲ್ಲಿ ಜನರು ತೀವ್ರ ಸಂಕಷ್ಟ ಎದುರಿಸಿದ್ದಾರೆ. ಮೊದಲ ಅಲೆ ತಡೆಯುವಲ್ಲಿ ಸರ್ಕಾರದ ಜತೆಗೆ ಸ್ಥಳೀಯ ಶಾಸಕರು, ಅಧಿಕಾರಿಗಳು ವಿಫಲರಾಗಿದ್ದರು. ಆದರೂ ಎಚ್ಚೆತ್ತುಕೊಂಡು ಎರಡನೇ ಅಲೆ ಬಂದಾಗ ನಿರ್ವಹಣೆ ಮಾಡಬಹುದಿತ್ತು. ಆದರೂ, ಅಧಿಕಾರಿಗಳು ಹಾಗೂ ಶಾಸಕರು ಎಚ್ಚೆತ್ತುಕೊಂಡಿಲ್ಲ. ಇದರಿಂದ ತಾಲೂಕಿನಲ್ಲಿ ಅತಿಹೆಚ್ಚು ಕೇಸ್ ಹಾಗೂ ನಿತ್ಯ ಎರಡ್ಮೂರು ಸಾವಿನಂತೆ ೫೦ಕ್ಕೂ ಹೆಚ್ಚು ಜನರು ಕರೊನಾಗೆ ಬಲೆಯಾಗಿದ್ದಾರೆ.
ಇನ್ನಾದರೂ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಕರೊನಾ ಮೂರನೇ ಅಲೆ ಎದುರಿಸಲು ಸಿದ್ದರಾಗಬೇಕು. ಅಗತ್ಯ ಕೋವಿಡ್ ಕೇಂದ್ರ, ಆರೋಗ್ಯ ಇಲಾಖೆ ತಯಾರಿ ಮಾಡಿಕೊಳ್ಳಬೇಕು. ಇಂಥ ತಯಾರಿಗಳಿಗೆ ಕಾಂಗ್ರೆಸ್ ಯಾವಾಗಲೂ ಪ್ರೋತ್ಸಾಹ ನೀಡಲಿದೆ. ಅದು ಬಿಟ್ಟು ರಾಜಕೀಯ ಮಾಡಿದರೆ, ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಅಕ್ರಮ ದಂದೆ ಮುಂದುವರಿದಿದ್ದು, ಜಿಲ್ಲೆಯಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಿದ್ದರೂ ತಾಲೂಕಿನಲ್ಲ ರಾಜಾರೋಷವಾಗಿ ನಡೆಯುತ್ತಿದೆ. ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ಜತೆಗೆ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಗೆ ಬರುವ ಎಲ್ಲ ಮದ್ಯವನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಶಾಸಕರು ತಾಲೂಕಿಗೆ ಆಮದು ಮಾಡಿಕೊಂಡು ಮೂರ್‍ನಾಲ್ಕು ಕಡೆ ಸ್ಟಾಕ್ ಮಾಡಿಕೊಂಡಿದ್ದಾರೆ.
ಅರಕೇರಾ, ಗಲಗ, ದೇವದುರ್ಗ, ಕೊಪ್ಪರ, ಗಬ್ಬೂರು, ಸುಂಕೇಶ್ವರಹಾಳ, ಕೊಪ್ಪರ ಸೇರಿ ತಾಲೂಕಿನ ವಿವಿಧೆಡೆ ಶಾಸಕರ ಮಾಲೀಕತ್ವದ ಬಾರ್ ಮತ್ತು ರೆಸ್ಟೋರೆಂಟ್‌ಗಳಿವೆ.. ಅವುಗಳ ಮೂಲಕ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ತಾಲೂಕಿಗೆ ಸಾವಿರಾರು ಕೋಟಿ ಅನುದಾನ ತಂದಿರುವುದಾಗಿ ಶಾಸಕರು ಹೇಳಿಕೊಳ್ಳೂತ್ತಿದ್ದು, ಎಲ್ಲಿಯೂ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ.
ಬಹುತೇಕ ಕಾಮಗಾರಿಗಳು ತಮ್ಮ ಬೆಂಬಲಿಗರು, ಕಾರ್ಯಕರ್ತರಿಗೆ ನೀಡಿದ್ದು, ಗುಣಮಟ್ಟ ಮರೀಚಿಕೆಯಾಗಿದೆ. ಅಲ್ಲದೇ ಒಂದೇ ಕಾಮಗಾರಿಗೆ ಎರಡೆರಡು ಅನುದಾನ ದುರ್ಬಳಕೆ ಮಾಡಲಾಗಿದೆ. ಎಚ್‌ಕೆಆರ್‌ಡಿಬಿ ಯೋಜನೆಗೆ ನೀರಾವರಿ ಇಲಾಖೆಯಿಂದ ಅನುದಾನ ಬಳಕೆ ಮಾಡುವುದು, ಅಲ್ಲದೆ ನರೇಗಾ ಯೋಜನೆಯಡಿ ನಕಲಿ ದಾಖಲೆ ಸೃಷ್ಟಿ ಮಾಡಿ, ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪಿಡಿಒ, ಕಾರ್ಯದರ್ಶಿಗಳು ಹಾಗೂ ತಾಪಂ ಇಒ ಮೂಲಕ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ದಾಖಲೆ ಸಂಗ್ರಹ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.
ಶಾಸಕರು ಹಾಗೂ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ, ವಿರೋಧಿಗಳನ್ನು ಬೆದರಿಸುವ ಕೇಸ್ ಹಾಕುವ ಮೂಲಕ ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಮುಷ್ಟೂರು ರಸ್ತೆ ಅಭಿವೃದ್ಧಿಗಾಗಿ ಹೋರಾಟ ಮಾಡಿದಾಗ, ಪೊಲೀಸರ ಮೂಲಕ ದೌರ್ಜನ್ಯ ನಡೆಸಿದ್ದಾರೆ. ಅನಗತ್ಯವಾಗಿ ಜಾಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ವಿರುದ್ಧ ಕೇಸ್ ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಶಾಸಕರ ತಪ್ಪಾಳಿಕೆ ಕ್ರಮ ಖಂಡಿಸಿ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್‌ನಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಮುಖಂಡರಾದ ಮಾನಪ್ಪ ಮೇಸ್ತ್ರಿ, ನಾಗರಾಜ ಪಾಟೀಲ್ ಗೌರಂಪೇಟೆ, ಎಕ್ಬಾಲ್ ಸಾಬ್, ಹೌದೊಡ್ಡಿ, ಶರಣಗೌಡ ಗೌರಂಪೇಟೆ, ರಂಗಪ್ಪ ಗೋಸಲ್, ಗೋವಿಂದರಾಜ್ ನಾಯಕ ಸೇರಿದಂತೆ ಇತರರಿದ್ದರು.