ಕೊರೊನಾ ನಿರ್ವಹಣೆ ಸಂಬಂಧ ಕೆ.ಮಹದೇವ್‍ರಿಂದ ಸಭೆ

ಪಿರಿಯಾಪಟ್ಟಣ: ಜೂ.04: ತಾಲ್ಲೂಕಿನ ವಿವಿಧ ಗ್ರಾ.ಪಂ ಗಳಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಶಾಸಕ ಕೆ.ಮಹದೇವ್ ಸಭೆ ನಡೆಸಿದರು.
ರಾಮನಾಥತುಂಗ, ಎನ್.ಶೆಟ್ಟಹಳ್ಳಿ, ಕಿತ್ತೂರು, ಅತ್ತಿಗೋಡು, ಹರದೂರು ಗ್ರಾ.ಪಂ ಗಳಲ್ಲಿ ಸಭೆ ನಡೆಸಿ ಶಾಸಕ ಕೆ.ಮಹದೇವ್ ಮಾತಾನಾಡಿ ಗ್ರಾ.ಪಂ ಅಧಿಕಾರಿ ಮತ್ತು ಸಿಬ್ಬಂದಿ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಪ್ರತಿನಿತ್ಯ ನಿಗಾವಹಿಸುವಂತೆ ಸೂಚಿಸಿ ಕೊರೊನಾ ಮುಕ್ತ ಗ್ರಾ.ಪಂ ಗೆ ಸರ್ಕಾರ ನೀಡುವ ಪುರಸ್ಕಾರದ ಜತೆಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಿಗೆ ಸೋಂಕು ದೃಢಪಡುತ್ತಿರುವ ಕಾರಣ ಯಾರಿಗೂ ಹೋಮ್ ಐಸೋಲೇಷನ್ ನಲ್ಲಿ ಅವಕಾಶ ನೀಡದೆ ಕೋವಿಡ್ ಸೆಂಟರ್ ಗೆ ದಾಖಲಿಸುವ ಮೂಲಕ ಅವರ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದರು. ಗ್ರಾ.ಪಂ ಅನುದಾನದ ಹಣದಲ್ಲಿ ಸ್ಯಾನಿಟೈಸರ್ ಮಾಸ್ಕ್ ಖರೀದಿಸಿ ವಿತರಿಸಿ ಪ್ರತಿ ಹಳ್ಳಿಗಳಲ್ಲಿ ಸ್ಯಾನಿಟೈಸ್ ಮಾಡಿಸುವಂತೆ ಸೂಚಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮತ್ತು ತಹಸೀಲ್ದಾರ್ ಕೆ.ಚಂದ್ರಮೌಳಿ ಕೊರೋನಾ ನಿರ್ವಹಣೆ ಸಂಬಂಧ ಮಾತನಾಡಿದರು.
ಈ ಸಂದರ್ಭ ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ಮಾಜಿ ಸದಸ್ಯ ಶಿವಣ್ಣ, ಅತ್ತಿಗೋಡು ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸರೋಜಮ್ಮ, ಪಿಡಿಒ ಮನು, ಹರದೂರು ಗ್ರಾ.ಪಂ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆ ಕಾವ್ಯಶ್ರೀ, ಪಿಡಿಒ ಮೋಹನ್ ಕುಮಾರ್, ಎಲ್ಲ ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.