ಕೊರೊನಾ ನಿರ್ವಹಣೆ ತಾಪಂ ಅಧಿಕಾರಿಗಳು ವಿಫಲ: ಆಕ್ರೋಶ ವ್ಯಕ್ತಪಡಿಸಿದ ಇಒ

ಪುತ್ತೂರು, ಜೂ.೧೧- ಸರ್ಕಾರಿ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ -೧೯ರ ಸ್ವ್ಯಾಬ್ ಪರೀಕ್ಷಾ ಕೇಂದ್ರದಲ್ಲಿ ಡಾಟಾ ಎಂಟ್ರಿ ನಡೆಸಲು ಒಂದೊಂದು ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲು ಇಲಾಖೆಗಳಿಗೆ ಸೂಚನೆ ನೀಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ಯಾರೂ ಮಾಡಿಲ್ಲ. ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಗಂಭೀರ ಆರೋಪವನ್ನು ಮಾಡಿದ್ದಲ್ಲದೆ. ಇಲಾಖಾಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಸಭೆಯಿಂದಲೇ ಹೊರಗೆ ನಡೆದ ಘಟನೆ ಗುರುವಾರ ನಡೆದಿದೆ.
ತಾಲೂಕು ಪಂಚಾಯತ್ ಕಿರು ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಳ್ಳ ಬಯಸಿದ ನವೀನ್ ಭಂಡಾರಿ, ಕೋವಿಡ್ ಆರಂಭಗೊಂಡಾಗಿನಿಂದ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಕಚೇರಿಗಳಲ್ಲಿ ಮತ್ತು ಜಿಲ್ಲೆಗಳ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಅಧಿಕಾರಿ/ ನೌಕರರು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಿದ್ದಲ್ಲಿ ತಪ್ಪದೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸರಕಾರದ ಸುತ್ತೋಲೆ ಇದ್ದರೂ ತಾಲೂಕಿನ ಇಲಾಖಾಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸದಿರುವುದು ವಿಷಾದನೀಯ ಎಂದು ಖೇದ ವ್ಯಕ್ತಪಡಿಸಿದರು.
ನಿಮ್ಮ ಸಿಬ್ಬಂದಿಗಳು ನಿಮ್ಮ ಕಂಟ್ರೋಲ್‌ನಲ್ಲಿ ಇಲ್ಲವೆಂದಾದರೆ ನೀವ್ಯಾಕಿರೋದು ಎಂದು ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರತಿಯೊಂದು ವಿಚಾರದಲ್ಲೂ ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಸಿಬ್ಬಂದಿಗಳು ಕರ್ತವ್ಯಕ್ಕೆ ಹೋಗುತ್ತಿದ್ದಾರೆ. ಅವರಿಗೆ ಬಂಧುಬಳಗ ಇಲ್ಲವೇ? ಕೇವಲ ಕೋವಿಡ್ ಕಾರ್ಯಪಡೆ ಸಭೆಗೆ ಹೋದರೆ ಸಾಲದು. ಕೋವಿಡ್ ನಿರ್ವಹಣೆಯಲ್ಲಿ ಟೀಮ್ ವರ್ಕ್ ಆಗಿ ಕೆಲಸ ಮಾಡಿ ಎಂದರು.
ತಾಲೂಕಿನ ೪೧ ಗ್ರಾಮ ಪಂಚಾಯತ್ ರಜೆಯ ದಿವಸವೂ ಕರ್ತವ್ಯದಲ್ಲಿದೆ. ನಿಮ್ಮ ಇಲಾಖೆಗೆ ಈ ಕೆಲಸ ಯಾಕೆ ಆಗುವುದಿಲ್ಲ. ನನಗೂ ಬೇರೆ ಕೆಲಸ ಇದೆ. ಆದರೂ ಹೆಚ್ಚುವರಿ ಕೆಲಸ ಮಾಡಲೇಬೇಕಾಗಿದೆ. ಆದರೆ, ಅದನ್ನೇ ನಿಮಗೆ ಯಾಕೆ ಮಾಡಲು ಆಗುವುದಿಲ್ಲ? ನೀವು ಯಾರಿಗೆ ಬೇಕಾದರೂ ದೂರು ಕೊಡಿ. ನಾನು ಇಲ್ಲಿಂದ ಯಾವುದೇ ಬಿಲ್ ಪಾಸ್ ಮಾಡುವುದಿಲ್ಲ. ಚುನಾವಣೆ ಡ್ಯೂಟಿಯಾದರೆ ಜಿಲ್ಲಾಧಿಕಾರಿಯವರ ಭಯದಿಂದ ಬೆಳಗ್ಗೆ ಎಲ್ಲರೂ ಬರುತ್ತೀರಿ. ಆದರೆ, ಈ ಪರಿಸ್ಥಿತಿಯಲ್ಲಿ ನನ್ನ ಆದೇಶಕ್ಕೆ ನಾನೇ ನಿಮ್ಮಲ್ಲಿ ವಿನಂತಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಏನಿದ್ದರೂ ಮುಂದೆ ನಿಮ್ಮ ವರದಿಯನ್ನು ಸಿಇಒ, ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಎಂದು ಅವರು ಸೂಚಿಸಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಸಹಾಯಕ ಕೃಷಿ ನಿದೇರ್ಶಕ ನಾರಾಯಣ ಶೆಟ್ಟಿ, ತೋಟಗಾರಿಕಾ ಇಲಾಖೆ ನಿರ್ದೇಶಕಿ ರೇಖಾ, ಪಶುಸಂಗೋಪನಾ ವೈದ್ಯಾಧಿಕಾರಿ ಡಾ. ಪ್ರಸನ್ನ ಹೆಬ್ಬಾರ್, ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿ ಉಪಸ್ಥಿತರಿದ್ದರು.
ಮಾಹಿತಿ ನೀಡಿಲ್ಲ
ಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕರು ಫ್ರಂಟ್‌ಲೈನ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ, ಈ ವಿಚಾರದಲ್ಲಿ ನನಗೆ ಬಂದ ಲೀಸ್ಟ್‌ನಲ್ಲಿ ನಮ್ಮ ಇಲಾಖೆಯಿಂದ ಸಿಬ್ಬಂದಿ ಶುಕ್ರವಾರಕ್ಕೆ ಕರ್ತವ್ಯ ಹಾಜರಾಗಲಿದ್ದಾರೆ. ಇನ್ನೂ ಡ್ಯೂಟಿ ಸರದಿ ಬಂದಿಲ್ಲ. ಇನ್ನೊಂದು ವಿಚಾರದಲ್ಲಿ ನಮ್ಮ ಇಲಾಖೆಯಿಂದ ಒಬ್ಬರು ಬಾಣಂತಿ ರಜೆ, ಇನ್ನೊಬ್ಬರು ಡೆಂಗ್ಯೂ ಸೇರಿದಂತೆ ಮೂರು ಮಂದಿ ರಜೆಯಲ್ಲಿದ್ದಾರೆ. ಸದ್ಯ ಒಬ್ಬರೇ ಸಿಬ್ಬಂದಿ ಇರೋದು. ಇಂತಹ ಸಂದರ್ಭದಲ್ಲಿ ನನಗೂ ಮಾಹಿತಿ ನೀಡದೆ ಸಿಬ್ಬಂದಿಯನ್ನು ಡ್ಯೂಟಿಗೆ ಹಾಕುವುದು ಸರಿಯಲ್ಲ. ಇಲ್ಲಿ ಮಿಸ್ ಕಮ್ಯೂನಿಕೇಶನ್ ಆಗಿದೆ ಎಂದು ಸಿಡಿಪಿಒ ಶ್ರೀಲತಾ ತಿಳಿಸಿದರು.