ಕೊರೊನಾ ನಿರೀಕ್ಷೆ ಮೀರಿ ಹೆಚ್ಚಳ

ನವದೆಹಲಿ ,ಮಾ.೨೪- ದೇಶದಲ್ಲಿ ಕೊರೊನೊ ಸೋಂಕು ಪ್ರಕರಣ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ತುಸು ಕಡಿಮೆಯಾಗಿದ್ದ ಸೋಂಕು ಪ್ರಕರಣ ಇಂದು ಗಣನೀಯವಾಗಿ ಹೆಚ್ಚಳವಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೪೭,೨೬೨ ಮಂದಿಗೆ ಸೋಂಕು ಕಾಣಿಸಿಕೊಂಡು, ಈ ವರ್ಷದಲ್ಲಿ ಅತ್ಯಧಿಕ ಸೋಂಕು ದಾಖಲಾಗಿದೆ. ಜೊತೆಗೆ ೨೭೫ ಮಂದಿ ಸಾವನ್ನಪ್ಪಿದ್ದು, ಈ ವರ್ಷದಲ್ಲಿ ಇದುವರೆಗಿನ ಅತಿಹೆಚ್ಚಿನ ಸಾವು ಪ್ರಮಾಣ ಇದಾಗಿದೆ.
ಇಂದು ಬೆಳಿಗ್ಗೆ ೮ ಗಂಟೆಯ ತನಕ ೨೩,೯೦೭ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಹೊಸದಾಗಿ ಇಂದು ದಾಖಲಾಗಿರುವ ಪ್ರಕರಣಗಳು ಸೇರಿದಂತೆ, ಇದುವರೆಗೂ ೧,೧೭,,೩೪,೦೫೮ ಮಂದಿಗೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿನ ಪೈಕಿ ೧,೧೨,೦೫,೧೬೦ ಮಂದಿ ಚೇತರಿಸಿಕೊಂಡಿದ್ದಾರೆ. ಸಾವಿನ ಪ್ರಮಾಣ ೧,೬೦,೪೪೧ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ದಾಖಲಾಗುತ್ತಿರುವ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಮಹಾರಾಷ್ಟ್ರ ಒಂದರಲ್ಲಿ ಸರಿಸುಮಾರು ಮೂವತ್ತು ಸಾವಿರ ಮಂದಿಗೆ ಕಾಣಿಸಿಕೊಂಡಿದೆ. ಇನ್ನುಳಿದಂತೆ ಕರ್ನಾಟಕ-ಪಂಜಾಬ್ ಹರಿಯಾಣ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ, ಕೆಲವೇ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದಾಗಿ ದೇಶದಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
೨ ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣ:
ದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಸಕ್ರಿಯ ಪ್ರಕರಣಗಳು ಧೃಡಪಟ್ಟಿವೆ. ಇದರ ಸಂಖ್ಯೆ ನೋಡಿದರೆ ಸೋಂಕಿನ ತೀವ್ರತೆ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.
ಫೆಬ್ರವರಿ ತಿಂಗಳ ಮಧ್ಯಭಾಗದವರೆಗೆ ೧.೩೪ ಲಕ್ಷದಷ್ಡಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ೨ ಲಕ್ಷಕ್ಕೂ ಹೆಚ್ಚಾಗಿದೆ. ಸದ್ಯ ೩,೬೮,೪೫೭ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ ಒಂದರಲ್ಲೇ ಸೋಂಕು ಮತ್ತು ಸಕ್ರಿಯ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ದೇಶದಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣ ಹೆಚ್ಚಲು ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೫ ಕೋಟಿಗೂ ಹೆಚ್ಚು ಲಸಿಕೆ:
ದೇಶದಲ್ಲಿ ಇದುವರೆಗೂ ಐದು ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ನಿನ್ನೆವರೆಗೂ ೫,೦೮,೪೧,೨೮೬ ಮಂದಿಗೆ ಲಸಿಕೆ ಹಾಕಲಾಗಿದೆ. ಈ ಪ್ರಮಾಣ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚು ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಚ್ಚಟ್ಟರಕ್ಕೆ ಸೂಚನೆ:
ಮಹಾರಾಷ್ಟ್ರ – ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣ ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಸೇರಿದಂತೆ, ದೇಶದ ಎಲ್ಲಾ ರಾಜ್ಯಗಳ ನಿಗ್ರಹಕ್ಕೆ ಅಗತ್ಯ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಸೂಚಿಸಿದೆ.
ಚಿಕಿತ್ಸೆ ಪತ್ತೆ ಪರೀಕ್ಷೆ ಪ್ರಮಾಣವನ್ನು ಹೆಚ್ಚು ಮಾಡುವ ಮೂಲಕ ಸೋಂಕಿತರನ್ನು ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ನೀಡುವ ಮೂಲಕ ಸೋಂಕು ಪ್ರಮಾಣವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ರಾಜ್ಯಗಳಿಗೆ ಆತಂಕ
ದೇಶದಲ್ಲಿ ಎರಡನೇ ಹಂತದ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಮಹಾರಾಷ್ಟ್ರ ಸೇರಿದಂತೆ, ಹಲವು ರಾಜ್ಯಗಳಲ್ಲಿ ಸೋಂಕು ಪ್ರಮಾಣ ನಿತ್ಯ ಹೆಚ್ಚಳವಾಗುತ್ತಿದೆ. ಇದು ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಸೇರಿದಂತೆ, ದೇಶಾದ್ಯಂತ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡಿದೆ.