ಕೊರೊನಾ ನಿಯಮ ಉಲ್ಲಂಘಿಸಿ ಶ್ರೀರಾಮುಲು ಪ್ರಚಾರ

ಬಳ್ಳಾರಿ, ಏ. ೨೩- ಕೊರೊನಾ ಸೋಂಕ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಚಿವ ಶ್ರೀರಾಮುಲು ಬಳ್ಳಾರಿ ಪಾಲಿಕೆ ಚುನಾವಣೆಗೆ ಪ್ರಚಾರ ನಡೆಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರವೇನೂ ಹೇಳುತ್ತಲೆ ಬಂದಿದೆ.ಆದರೆ ಮಂತ್ರಿ ಮಂಡಲದ ಸಚಿವರೊಬ್ಬರು ಈ ನಿಯಮಗಳನ್ನು ಮರೆತು ಪ್ರಚಾರ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕೊರೊನಾ ನಿಯಮ ಪ್ರಕಾರ ಕೇವಲ ಐದೇ ಜನ ಸೇರಿಸಿ ಪ್ರಚಾರ ಮಾಡುವಂತೆ ಸರ್ಕಾರ ನೀಡಿರುವ ಕಟ್ಟುನಿಟ್ಟಿನ ಸೂಚನೆಯನ್ನು ನಿರ್ಲಕ್ಷಿಸಿ ಸಚಿವ ಶ್ರೀರಾಮುಲು ಪ್ರಚಾರ ಕೈಗೊಂಡಿದ್ದಾರೆ.
ಬಳ್ಳಾರಿ ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ನೂರಾರು ಜನರೊಂದಿಗೆ ಪ್ರಚಾರ ನಡೆಸಿ ಕೊರೊನಾ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೆ ಭಾರಿ ಜನಸಂದಣಿಯಲ್ಲಿ ಶ್ರೀರಾಮುಲು ಪ್ರಚಾರ ನಡೆಸಿದ್ದು, ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಬಳ್ಳಾರಿ ನಗರದ ೧೬ನೇ ವಾರ್ಡಿನಲ್ಲಿ ನೂರಾರು ಬೆಂಬಲಿಗರೊಂದಿಗೆ ಪ್ರಚಾರ ನಡೆಸಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.