ಕೊರೊನಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ


ಬೆಂಗಳೂರು,ಏ.೧೬-ಕೊರೊನಾ ಎರಡನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎಚ್ಚರಿಕೆ ನೀಡಿದ್ದಾರೆ.
ಕಡ್ಡಾಯವಾಗಿ ಸಭೆ, ಸಮಾರಂಭ, ಪ್ರತಿಭಟನೆ ಮಾಡುವವರು ನಿಗದಿತ ಸಂಖ್ಯೆಯಲ್ಲಿ ಮಾತ್ರ ಇರಬೇಕು. ಅಲ್ಲದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು.
ಹೈಕೋರ್ಟ್ ಅದೇಶ ನಾವು ಪಾಲನೆ ಮಾಡಬೇಕಾಗುತ್ತದೆ. ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಉಲ್ಲಂಘನೆ ಮಾಡಿದವರ ವಿರುದ್ಧ ಕೇಸ್ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಪೊಲೀಸ್? ಇಲಾಖೆ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲಾಖೆ ಸಿಬ್ಬಂದಿ ಲಸಿಕೆ ಪಡೆದಿರುವುದರಿಂದ ಸದ್ಯಕ್ಕೆ ಸಮಸ್ಯೆಯಿಲ್ಲ ಎಂದರು.
ಕಳೆದ ವರ್ಷದಂತೆ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಈ ಬಾರಿ ಹೊರಡಿಸುವುದಿಲ್ಲ. ಸರ್ಕಾರದ ಆದೇಶ ನೋಡಿಕೊಂಡು ಕೆಲಸ ಮಾಡುತ್ತೇವೆ. ಸಮಯ ಸಮಯಕ್ಕೆ ಸರ್ಕಾರದಿಂದ ಯಾವ ಆದೇಶ ಬರಲಿದೆಯೋ ಅದನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ನಾಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದ ಎಸ್‌ಐಟಿ ತನಿಖಾ ವರದಿ ಹೈಕೋರ್ಟ್?ಗೆ ಸಲ್ಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಕೋರ್ಟ್ ಮುಂದೆ ಕೇಸ್ ಇದೆ. ಟೀಕೆ ಮಾಡುವುದು ಸೂಕ್ತವಲ್ಲ. ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಹೇಳಿದರು.