ಕೊರೊನಾ ನಿಯಮ ಉಲ್ಲಂಘನೆ ಪಂಜಾಬಿ ನಟ ಜಿಪ್ಪಿ ಗ್ರೇವಾಲ್ ಸೆರೆ

ಬೆಂಗಳೂರು,ಮೇ.೩-ಕೊರೊನಾ ನಿಯಮ ಉಲ್ಲಂಘಿಸಿ ಚಿತ್ರೀಕರಣದಲ್ಲಿ ತೊಡಗಿದ್ದ ಖ್ಯಾತ ಪಂಜಾಬಿ ನಟ ಜಿಮ್ಮೆ ಶೆರ್ಗಿಲ್ ಅವರ ಮೇಲೆ ಕ್ರಮ ಕೈಗೊಂಡ ಬೆನ್ನಲ್ಲೇ ಮತ್ತೊಬ್ಬ ಪಂಜಾಬಿ ಖ್ಯಾತ ನಟ ಹಾಗೂ ಗಾಯಕ ಜಿಪ್ಪಿ ಗ್ರೇವಾಲ್ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣದಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾಗಿದ್ದಾರೆ.
ದೇಶದ ಬಹುತೇಕ ಎಲ್ಲ ರಾಜ್ಯಗಳಂತೆಯೇ ಪಂಜಾಬ್‌ನಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಪಂಜಾಬ್ ಸರ್ಕಾರ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೂ ಬ್ರೇಕ್ ಹಾಕಿದೆ.
ಆದರೆ ನಟ ಜಿಪ್ಪಿ ಗ್ರೇವಾಲ್, ಪಂಜಾಬ್‌ನ ಪಟಿಯಾಲದ ಬಾನೂರ್‌ನಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನೂರಕ್ಕೂ ಹೆಚ್ಚು ಜನರ ತಂಡದ ಜೊತೆ ಚಿತ್ರೀಕರಣದಲ್ಲಿ ತೊಡಗಿದ್ದು ಬೆಳಕಿಗೆ ಬಂದಿದೆ.
ತಕ್ಷಣ ಎಚ್ಚೆತ್ತ ಸ್ಥಳೀಯ ಪೊಲೀಸರು ಬಾನೂರಿಗೆ ತೆರಳಿದ ಕೂಡಲೇ ಚಿತ್ರೀಕರಣ ಸ್ಥಳದಲ್ಲಿ ಜಮಾಯಿಸಿದ್ದ ನೂರಕ್ಕೂ ಹೆಚ್ಚು ಮಂದಿಯಲ್ಲಿ ಬಹುತೇಕರು ಕಾಲ್ಕಿತ್ತಿದ್ದಾರೆ. ಹೀಗಾಗಿಯೇ ಸ್ಥಳದಲ್ಲಿದ್ದ ಚಿತ್ರದ ನಾಯಕ ಜಿಪ್ಪಿ ಗ್ರೇವಾಲ್ ಹಾಗೂ ಚಿತ್ರತಂಡದ ಕೆಲವರನ್ನು ಪೊಲೀಸರು ಬಂಧಿಸಿ ಬಾನೂರ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಜಿಪ್ಪಿ ಗ್ರೇವಾಲ್ ಹಾಗೂ ತಂಡದ ಮೇಲೆ ಐಪಿಸಿ ಸೆಕ್ಷನ್ ೧೮೮, ಎಪಿಡೆಮಿಕ್ ಡಿಸೀಸ್ ಆಕ್ಟ್ ಹಾಗೂ ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನು ಜಿಪ್ಪಿ ಗ್ರೇವಾಲ್ ಬಂಧನದ ವಿಷಯ ಗೊತ್ತಾಗುತ್ತಲೇ ಹಲವು ರಾಜಕಾರಿಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಬಾನೂರ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣ ದಾಖಲಿಸಿಕೊಳ್ಳದಿರಲು ಹಾಗೂ ಕ್ರಮ ಕೈಗೊಳ್ಳದಿರಲು ಒತ್ತಡ ಹೇರಿದ್ದಾರೆ.
ಇನ್ನು ಬಂಧನವಾದ ಕೆಲವೇ ಸಮಯದಲ್ಲಿ ನಟ ಜಿಪ್ಪಿ ಗ್ರೇವಾಲ್ ಹಾಗೂ ಚಿತ್ರತಂಡದವರು ಜಾಮೀನು ಪಡೆದಿದ್ದಾರೆ.
ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದು. ಆದರೆ ಸದ್ಯದ ಪರಿಸ್ಥಿತಿ ಚಿತ್ರೀಕರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಹಾಗಿದ್ದರೂ ಸಹ ಚಿತ್ರತಂಡದವರು ಬಾನೂರ್‌ಗೆ ಬಂದು ಎಲ್ಲ ಕ್ರಮಗಳನ್ನು ಗಾಳಿಗೆ ತೂರಿ ಚಿತ್ರೀಕರಣದಲ್ಲಿ ತೊಡಗಿದ್ದರು ಇದು ಕೊನೆಯ ದಿನದ ಶೂಟ್ ಆಗಿದ್ದು, ಕ್ಲೈಮ್ಯಾಕ್ಸ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿತ್ತು.
ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ಜಿಮ್ಮಿ ಶೇರ್ಗಿಲ್ ಸಹ ಕೊರೋನಾ ಲಾಕ್‌ಡೌನ್ ರೂಲ್ಸ್‌ಅನ್ನು ಉಲ್ಲಂಘಿಸಿ ಪಂಜಾಬ್‌ನ ಲುಧಿಯಾನದಲ್ಲಿ ತಮ್ಮ ವೆಬ್‌ಸಿರೀಸ್ ಒಂದರ ಶೂಟಿಂಗ್ ನಡೆಸುತ್ತಿದ್ದರು. ವಿಷಯ ಗೊತ್ತಾಗಿ ಸ್ಥಳೀಯ ಪೊಲೀಸರು ಶೂಟಿಂಗ್ ಸ್ಥಳಕ್ಕೆ ಭೇಟಿ ಕೊಟ್ಟು ಚಿತ್ರೀಕರಣ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಜೊತೆಗೆ ನಟ ಜಿಮ್ಮಿ ಶೇರ್ಗಿಲ್ ಸೇರಿದಂತೆ ೩೫ ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದರು.