ಕೊರೊನಾ ನಿಯಂತ್ರಣ ಸಂಪುಟ ಸಭೆಯಲ್ಲಿ ಕಠಿಣ ನಿರ್ಧಾರ


ಬೆಂಗಳೂರು, ಏ. ೨೪- ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಸೋಮವಾರ ನಡೆಯುವ ಸಚಿವ ಸಂಪುಟ ಸ ಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ತಡೆಗೆ ಕಠಿಣ ನಿಯಮಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರ ಸಚಿವ ಸಂಪುಟ ಸ ಭೆ ಕರೆದಿದ್ದಾರೆ. ಸಂಪುಟ ಸಭೆಯಲ್ಲಿ ಸಚಿವರುಗಳೆಲ್ಲರೂ ಕೊರೊನಾಗೆ ಸಂಬಂಧಿಸಿದಂತೆ ಅವರವರ ಸಲಹೆ, ಅಭಿಪ್ರಾಯಗಳನ್ನು ಹೇಳುವರು. ಹಾಗೆಯೇ ಆರೋಗ್ಯ ಸಚಿವನಾಗಿ ಆರೋಗ್ಯ ಇಲಾಖೆಯ ಬೇಡಿಕೆ, ಕೊರೊನಾ ತಡೆಗೆ ಆಗಬೇಕಾಗಿರುವ ಮತ್ತಷ್ಟು ಬಿಗಿ ಕ್ರಮಗಳು ಎಲ್ಲವನ್ನು ಸಂಪುಟ ಸಭೆಯ ಮುಂದಿಡುತ್ತೇನೆ ಎಂದರು.
ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟ ಸದಸ್ಯರು ಸೇರಿ ಮತ್ತಷ್ಟು ಕಠಿಣ ನಿಯಮದ ಜಾರಿ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಲ್ಲದರಲ್ಲೂ ಸಂಪುಟದ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸಭೆಯ ನಂತರ ಕೊರೊನಾ ತಡೆಗೆ ಮತ್ತಷ್ಟು ಕಠಿಣ ನಿಯಮಗಳು ಜಾರಿಯಾಗುವ ಬಗ್ಗೆ ಈಗಲೇ ಏನನ್ನೂ ಹೇಳುವುದು ಸರಿಯಲ್ಲ. ಸಂಪುಟ ಸಭೆಯಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.