ಕೊರೊನಾ ನಿಯಂತ್ರಣ ಪ್ಯಾಕೇಜ್‌ಗೆ ಟ್ರಂಪ್ ಸಹಿ

ವಾಷಿಂಗ್ಟನ್, ಡಿ.೨೮- ಬರೋಬ್ಬರಿ ೯೦೦ ಬಿಲಿಯನ್ ಡಾಲರ್ ಮೊತ್ತದ ಕೊರೊನಾ ಸೋಂಕು ನಿಯಂತ್ರಣ ನೆರವು ಹಾಗೂ ವೆಚ್ಚದ ಪ್ಯಾಕೇಜ್‌ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಸಹಿ ಹಾಕಿದ್ದಾರೆ.
ಕೋವಿಡ್-೧೯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿರುವ ಸಾವಿರಾರು ಅಮೆರಿಕನ್ನರಿಗೆ ನಿರುದ್ಯೋಗ ಭತ್ಯೆ ಸೌಲಭ್ಯವನ್ನು ಒದಗಿಸುವುದು ಸೇರಿದಂತೆ ೯೦೦ ಬಿಲಿಯನ್ ಡಾಲರ್ ಮೊತ್ತದ ಕೊರೊನಾ ವೈರಸ್ ಪರಿಹಾರ ನಿಧಿ ಹಾಗೂ ಸಾಮಾನ್ಯ ಸರ್ಕಾರಿ ವೆಚ್ಚಕ್ಕಾಗಿ ಈ ಪ್ಯಾಕೇಜ್ ಪರಿಣಾಮಕಾರಿ ಆಗಿದೆ.
ಆರಂಭದಲ್ಲಿ ಟ್ರಂಪ್ ಅವರು, ದೈನಂದಿನ ಜನಜೀವನಕ್ಕೆ ಈ ಪ್ಯಾಕೇಜ್‌ನಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇಅಲ್ಲದೆ, ಪ್ಯಾಕೇಜ್‌ನ ಅವಧಿಯನ್ನು ವಿಸ್ತರಿಸುವುದಕ್ಕೆ ಟ್ರಂಪ್ ಅವರು ಅಂಗೀಕಾರ ನೀಡದೆ ಇದ್ದ ಪರಿಣಾಮವಾಗಿ ೧.೪೦ ಕೋಟಿಗೂ ಅಧಿಕ ಮಂದಿ ನಿರುದ್ಯೋಗಿಗಳು ತಮಗೆ ದೊರೆಯುತ್ತಿದ್ದ ಹೆಚ್ಚುವರಿ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆಂದು ಕಾರ್ಮಿಕ ಇಲಾಖೆ ದತ್ತಾಂಶಗಳು ತಿಳಿಸಿತ್ತು.
ಇದರ ಬೆನ್ನಲ್ಲೇ ಟ್ರಂಪ್, ಸಾಂಕ್ರಾಮಿಕ ನೆರವು ಮತ್ತು ಖರ್ಚು ಪ್ಯಾಕೆಜ್ ಕಾನೂನಿಗೆ ಸಹಿ ಹಾಕಿದ್ದಾರೆ.