ಕೊರೊನಾ ನಿಯಂತ್ರಣ ನಿಗಾ ವಹಿಸಲು ಐಪಿಎಸ್ ಅಧಿಕಾರಿಗಳ ನಿಯೋಜನೆ

ಬೆಂಗಳೂರು,ಏ.೨೨-ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ ವಲಯವಾರು ಉಸ್ತುವಾರಿಗಳಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗೃಹ ಇಲಾಖೆ ಕೈಗೊಳ್ಳುವ ಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಇವರು ಪರಾಮರ್ಶೆ ನಡೆಸಲಿದ್ದಾರೆ.
ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ ಪಾಲನೆಯ ವಿಚಾರವನ್ನೂ ನಿಯೋಜಿತ ಐಪಿಎಸ್? ಅಧಿಕಾರಿಗಳು ಗಮನಿಸಲಿದ್ದಾರೆ.
ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ (ಉತ್ತರ ವಲಯ)- ವಿಜಯಪುರ, ಬಾಗಲಕೋಟೆ, ಬೆಳಗಾವಿ. ಕೆಎಸ್‌ಪಿಎಚ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಎನ್.ಮೂರ್ತಿ (ಬಳ್ಳಾರಿ ವಲಯ)-ಬಳ್ಳಾರಿ, ರಾಯಚೂರು. ನೇಮಕಾತಿ ವಿಭಾಗದ ಎಡಿಜಿಪಿ ಅಮ್ರೀತ್ ಪೌಲ್(ದಕ್ಷಿಣ ವಲಯ)-ಮೈಸೂರು, ಮಂಡ್ಯ, ಹಾಸನ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅರುಣ್ ಜೆಜಿ ಚಕ್ರವರ್ತಿ (ಈಶಾನ್ಯ ವಲಯ)-ಬೀದರ್, ಕಲ್ಬುರ್ಗಿ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ (ಕೇಂದ್ರ ವಲಯ)-ಬೆಂ.ಗ್ರಾಮಾಂತರ, ತುಮಕೂರು. ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ (ಪೂರ್ವ ವಲಯ)-ಶಿವಮೊಗ್ಗ, ದಾವಣಗೆರೆ. ಡಿಸಿಆರ್‌ಇ ಪೊಲೀಸ್ ಮಹಾ ನಿರೀಕ್ಷಕ ಹೇಮಂತ್ ನಿಂಬಾಳ್ಕರ್ (ಪಶ್ಚಿಮ ವಲಯ)-ದಕ್ಷಿಣ ಕನ್ನಡ, ಉಡುಪಿ ಉಸ್ತುವಾರಿಗಾಗಿ ನಿಯೋಜಿಸಲಾಗಿದೆ.
ನಿಯೋಜನೆಗೊಂಡ ಅಧಿಕಾರಿಗಳು ಇಂದಿನಿಂದ ತಮ್ಮ ವಲಯಗಳಿಗೆ ಭೇಟಿ ನೀಡಿ ಆಯಾ ಜಿಲ್ಲೆಗಳಲ್ಲಿ ಕೊರೊನಾ ವಿರುದ್ಧ ಜರುಗಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಹಾಗೂ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬೇಕಾದ ಕಾರ್ಯಗಳನ್ನು ಪರಾಮರ್ಶಿಸಬೇಕು. ಡಿಜಿ-ಐಜಿಪಿ ಅವರಿಗೆ ಏ.೨೬ರೊಳಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಕೊರೊನಾ ಸಮಸ್ಯೆ ಬಗೆಹರಿಯುವವರೆಗೂ ಕಾಲಕಾಲಕ್ಕೆ ಭೇಟಿ ನೀಡಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಾಮರ್ಶಿಸಬೇಕು ಎಂದು ತಿಳಿಸಲಾಗಿದೆ.