ಕೊರೊನಾ ನಿಯಂತ್ರಣ ಕೇಂದ್ರ ನಿರ್ಲಕ್ಷ್ಯ ರಾಹುಲ್ ಟೀಕೆ

ನವದೆಹಲಿ.ಮಾ.೧೫- ಕೊರೊನಾ ಇಂದಿಗೂ ಅತಿದೊಡ್ಡ ಬೆದರಿಕೆಯಾಗಿದ್ದು, ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮನವಿ ಮಾಡಿದ್ದಾರೆ.
ಕೊರೊನಾ ಸೋಂಕು ನಿಭಾಯಿಸುವಲ್ಲಿ ಕೇಂದ್ರಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಕೋವಿಡ್-೧೯ ಇಡೀ ವಿಶ್ವಕ್ಕೆ ಅತಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದ್ದು, ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕಳೆದ ೪ ವಾರಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ವಾರದಲ್ಲಿ ಶೇ. ೩೩ರಷ್ಟು ಸೋಂಕು ಏರಿಕೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಜುಲೈನಿಂದ ದೇಶದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.