ಕೊರೊನಾ ನಿಯಂತ್ರಣ ಅಸಾಧ್ಯ


ನವದೆಹಲಿ,ಜ.೧೨-ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಮಹಾಮಾರಿ ನಿಯಂತ್ರಿಸಲು ಲಸಿಕೆ ಕಂಡು ಹಿಡಿದರು ಸಹ ಕೊರೊನಾ ಸಂಪೂರ್ಣ ನಿಯಂತ್ರಣ ಸಾಧ್ಯವೇ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ವಿಶ್ವದಾದ್ಯಂತ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹಲವು ಲಸಿಕೆಗಳು ಅಭಿವೃದ್ಧಿಗೊಂಡಿವೆ. ಇನ್ನಷ್ಟು ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ. ಕಳೆದ ಒಂದು ವಾರದ ಹಿಂದೆ ಬ್ರಿಟನ್, ಅಮೆರಿಕಾ, ಫ್ರಾನ್ಸ್, ಕೆನಡಾ, ಜರ್ಮನಿ, ಇಸ್ರೇಲ್, ನೆದರ್ ಲ್ಯಾಂಡ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಲಕ್ಷಾಂತರ ಜನರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.
ಭಾರತದಲ್ಲಿಯೂ ಜ.೧೬ ರಿಂದ ಕೊರೊನಾ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಆದರೆ, ಈ ಸಾಮೂಹಿಕ ಲಸಿಕಾ ಕಾರ್ಯಕ್ರಮಗಳು ಕೊರೊನಾ ಸೋಂಕನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ವಿಶ್ವ ಆರೋಗ್ಯ ಸಂಥೆ ವಿಜ್ಞಾನಿಗಳು ಹೇಳಿದ್ದಾರೆ.
ಈ ವರ್ಷ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯ. ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ದೇಶದ ಜನಸಂಖ್ಯೆಯ ಅಂಶವನ್ನು ಗಮನಿಸುವುದಾದರೆ ಸಾಮಾಜಿಕ ಅಂತರ, ಇನ್ನಿತರೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸುಲಭದ ಮಾತಲ್ಲ ಹಾಗಾಗಿ ಸೋಂಕಿನ ಪ್ರಕರಣಗಳು ನಿರಂತರವಾಗಿರುತ್ತವೆ ಎಂದು ಹೇಳಿದ್ದಾರೆ.
ಲಸಿಕೆಗಳು ಕೊರೊನಾ ವಿರುದ್ಧ ಹೋರಾಡಲು ಆರಂಭವಾದರೂ ೨೦೨೧ರಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಕೊರೊನಾ ಸೋಂಕು ತಗುಲದಂತೆ ತಡೆಯಲು ಸಾಧ್ಯವಿಲ್ಲ. ಕೆಲವೇ ದೇಶಗಳಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತದೆಯಾದರೂ, ಎಲ್ಲಾ ದೇಶಗಳಲ್ಲಿಯೂ ಇದು ಸಾಧ್ಯವಿಲ್ಲ ದೇಶದ ಜನರಿಗೆ ಕೊರೊನಾ ಸೋಂಕು ತಗುಲದಂತೆ ತಡೆಯಲು ದೇಶದಲ್ಲಿ ಶೇ.೭೦ರಷ್ಟು ಲಸಿಕೆ ನೀಡುವುದು ಅವಶ್ಯಕವಾಗಿದೆ. ಹಾಗಾದಾಗ ಅಲ್ಲಿಯ ಜನರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯ. ಆದರೆ, ಕೊರೊನಾ ಸಾಂಕ್ರಾಮಿಕ ಸ್ವರೂಪಕ್ಕೆ ಇಳಿದಿದ್ದರೆ ಈ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ ಎಂದಿದ್ದಾರೆ.
ಕೊರೊನಾ ಸೋಂಕಿನಿಂದ ಸೋಂಕಿನ ರೂಪಾಂತರಗಳು ಕಾಣಿಸಿಕೊಳ್ಳುತ್ತಿರುವುದು ಕಠಿಣ ಸವಾಲು ಒಡ್ಡುತ್ತದೆ. ರೂಪಾಂತರಗಳು ಈ ಕೊರೊನಾ ನಿಯಂತ್ರಣಕ್ಕೆ ದೇಶಗಳು ತೆಗೆದುಕೊಂಡ ಕ್ರಮಗಳನ್ನು ಬದಲಿಸಬಹುದು. ಹೀಗಿರುವ ಸೋಂಕಿಗೆ ಇನ್ನಷ್ಟು ಶಕ್ತಿ ಕೊಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.