ಕೊರೊನಾ ನಿಯಂತ್ರಣದಲ್ಲಿ ಭಾರತದ ವ್ಯಾಕ್ಸಿನ್ ನಂ.1 : ಸೂಲಿಬೆಲೆ

ಬೀದರ:ಜ.10: ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಭಾರತ ತಯಾರಿಸಿದ ವ್ಯಾಕ್ಸಿನ್ ನಂಬರ್ ಒನ್ ಆಗಿದೆ. ಇಡೀ ವಿಶ್ವವೇ ಭಾರತದ ವ್ಯಾಕ್ಸಿನ್‍ಗಾಗಿ ಬೇಡಿಕೆ ಇಟ್ಟಿದೆ. ಏಕೆಂದರೆ ಶತಶತಮಾನಗಳಿಂದಲೂ ಭಾರತದ ಮೇಲೆ ಇಡೀ ವಿಶ್ವ ಇಟ್ಟಿರುವ ವಿಶ್ವಾಸವೇ ಕಾರಣ ಎಂದು ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ನುಡಿದರು.

ಕರ್ನಾಟಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಯುವಾ ಬ್ರಿಗೇಡ್ ಮತ್ತು ಸಮರ್ಥ ಸೇವಾ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜಿನಲ್ಲಿ ಪ್ರಾಧ್ಯಾಪಕರೊಂದಿಗೆ “ಕೊರೊನಾ ನಂತರದ ಸವಾಲುಗಳು” ವಿಷಯದ ಮೇಲೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ತಯಾರಿಸಿದ ವ್ಯಾಕ್ಸಿನ್ ಶೇ. 75% ಜನರಿಗೆ ಸದುಪಯೋಗವಾಗಿದೆ. ಇದು ಇಡೀ ವಿಶ್ವವೇ ಒಪ್ಪಿಕೊಂಡು ಅಪ್ಪಿಕೊಂಡಿದೆ. ಆದರೆ ದುರ್ದೈವ ನಮ್ಮವರೇ ಅದನ್ನು ಒಪ್ಪಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ. ಸ್ವತಃ ರಷ್ಯಾ ಪ್ರಧಾನಿಗಳೇ ವ್ಯಾಕ್ಸಿನ್ ತೆಗೆದುಕೊಂಡು ಆರಾಮಾಗಿದ್ದಾರೆ ಎಂದರು. ಕೊರೊನಾ ಬಂದರೆ ಹೆದರಬೇಡಿ. ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರಕ್ಕಿಂತಲೂ ಧೈರ್ಯ ಬಹಳ ದೊಡ್ಡದು. ಧೈರ್ಯದಿಂದಲೇ ವೈರಸ್ ಓಡಿಸಲು ಸಾಧ್ಯ. ಕೊರೊನಾ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಆದರೆ ಅದನ್ನು ಸಾವಾಲಾಗಿ ಸ್ವೀಕರಿಸಿ ಪುಟಿದೆದ್ದು ನಿಲ್ಲಬೇಕು ಎಂದರು.

ಕೊರೊನಾ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ ಹಾಳಾಗಿದೆ ನಿಜ ಆದರೆ ಪ್ರಾಧ್ಯಾಪಕರು ಮತ್ತೆ ಸತತ ಪ್ರಯತ್ನದಿಂದ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ, ಶಿಕ್ಷಣದ ಪುನಶ್ಚೇತನಕ್ಕಾಗಿ ವಿವಿದ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸಬೇಕು. ಇದರಲ್ಲಿ ಪ್ರಾಧ್ಯಾಪಕರ ಪಾತ್ರ ಹಿರಿದಾದುದು. ಇಂದು ಕಾಲೇಜಿಗೆ ಕರೆಸಿ ಸಂವಾದ ನಡೆಸಿದ್ದಕ್ಕಾಗಿ ಅಭಾರಿಯಾಗಿದ್ದೇನೆ. ಸಂವಾದ ಯಶಸ್ವಿಯಾಯಿತು ಎಂದರು.

ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ “ಇಂದು ನಮ್ಮ ಮಹಾವಿದ್ಯಾಲಯಕ್ಕೆ ಸೂಲಿಬೆಲೆಯವರು ಆಗಮಿಸಿ ಪ್ರಾಧ್ಯಾಪಕರಿಗೆ ಮಾರ್ಗದರ್ಶನ ನೀಡಿ ಮತ್ತೆ ಹೊಸ ಹುರುಪು ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾಡಿನಾದ್ಯಂತ ಶಿಕ್ಷಣ, ಸಮಾಜ ಮತ್ತು ದೇಶಭಕ್ತಿಯನ್ನು ಜನತೆಯಲ್ಲಿ ತುಂಬುತ್ತಿರುವ ಯುವಕರ ಆಶಾಕಿರಣವಾಗಿ ದುಡಿಯುತ್ತಿರುವ ಸೂಲಿಬೆಲೆಯವರು ಈ ಭಾರತ ಮಾತೆಯ ಪುತ್ರ ಎಂದು ಬಣ್ಣಿಸಿದರು.

ಸಿಬ್ಬಂದಿ ಕಾರ್ಯದರ್ಶಿಗಳಾದ ಅನಿಲಕುಮಾರ ಚಿಕ್ಕಮಣೂರ ಸ್ವಾಗತಿಸಿದರು. ವೀರೇಶ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನಿತಾ ಕೂಡ್ಲಿಕರ್ ವಂದಿಸಿದರು. ಸಚಿನ್ ವಿಶ್ವಕರ್ಮ ನಿರೂಪಿಸಿದರು. ವೇದಿಕೆ ಮೇಲೆ ಸಮರ್ಥ ಸೇವಾ ಸಂಸ್ಥೆ ಅಧ್ಯಕ್ಷ ಪುನಿತ್ ಸಾಳೆ, ವೈಜಿನಾಥ ಚಿಕ್ಕಬಸೆ, ರಾಜೇಂದ್ರ ಬಿರಾದಾರ, ಶ್ಯಾಮಕಾಂತ ಕುಲಕರ್ಣಿ, ಶಶಿಧರ ಪಾಟೀಲ, ಡಾ. ಪೂಜಾ ಸೂರ್ಯವಂಶಿ, ಡಾ. ಮಾದಯ್ಯ ಸ್ವಾಮಿ ಸೇರಿದಂತೆ ಅನೇಕ ಪ್ರಾಧ್ಯಪಕರು ಸಂವಾದದಲಿ ಪಾಲ್ಗೊಂಡಿದ್ದರು.