ಕೊರೊನಾ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ: ಅಂಗಡಿ-ಮುಂಗಟ್ಟು ಬಂದ್, ರಸ್ತೆ ಖಾಲಿ-ಖಾಲಿ

ದಾವಣಗೆರೆ,ಏ.24: ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿಂದು ತುರ್ತು ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಅಲ್ಲದೆ, ವಾಹನ ಮತ್ತು ಜನರ ಸಂಚಾರ ವಿರಳವಾಗಿದ್ದರ ಪರಿಣಾಮ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದವು.ವಾರಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಸುರಕ್ಷತೆ ನಿಯಮಗಳ ಪಾಲಿಸಿ ಅಗತ್ಯ ಸೇವೆಗಳ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿತ್ತಾದರೂ ನಗರದ ಮಾರುಕಟ್ಟೆ ಪ್ರದೇಶಗಳಾದ ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆಯಲ್ಲಿ ಹೇಳಿಕೊಳ್ಳು ಮಟ್ಟದಲ್ಲಿ ತರಕಾರಿ ಅಂಗಡಿಗಳು ಹಾಗೂ ಗ್ರಾಹಕರು ಕಂಡು ಬರಲಿಲ್ಲ. ಎಪಿಎಂಸಿ ಯಾರ್ಡ್ನ ತರಕಾರಿ ಮಂಡಿಯಲ್ಲಿ ನಾಲ್ಕೈದು ಅಂಗಡಿ ತೆಗೆದಿತ್ತಾದರೂ ಪೊಲೀಸರು ಬೆಳ್ಳಿಗ್ಗೆಯೇ ಮುಚ್ಚಿಸಿದರು. ನಗರದಲ್ಲಿ ತೆರೆದಿದ್ದ ಹೋಟೆಲ್, ಅಂಗಡಿ-ಮುಂಗಟ್ಟಗಳನ್ನು ಪೊಲೀಸರು 10 ಗಂಟೆ ಆಗುತ್ತಿದ್ದಂತೆ ಬಂದ್ ಮಾಡಿಸಲು ರೋಡಿಗೆ ಇಳಿದರು. ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್ ಮಾಡಿದ್ದರು. ಆದರೆ, ಇನ್ನೂ ಕೆಲವರು ಪೊಲೀಸರು ಬಂದು ಅವಾಜ್ ಹಾಕಿದ ನಂತರವೇ ಅಂಗಡಿ ಸೆಟ್ರಸ್ ಎಳೆದರು. ಹತ್ತು ಗಂಟೆಯ ನಂತರ ರಸ್ತೆಗಿಳಿದ ಪೊಲೀಸರು ಆಗಷ್ಟೆ ತೆರೆದು ವ್ಯಾಪಾರ ಅರಂಭಿಸಿದ್ದ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಬಟ್ಟೆ ಅಂಗಡಿ, ಟೀ ಶಾಪ್, ಹಣ್ಣಿನ ಅಂಗಡಿಗಳು, ಬೆಳ್ಳಿ, ಬಂಗಾರದ ಅಂಗಡಿಗಳನ್ನು ಮುಲಾಜಿಲ್ಲದೇ ಮುಚ್ಚಿಸಿದರು. ರಾಮ್ ಅಂಡ್ ಕೋ ವೃತ್ತ, ಎವಿಕೆ ಕಾಲೇಜು ರಸ್ತೆ, ಅಶೋಕ ರಸ್ತೆ, ಕಾಳಿಕಾದೇವಿ ರಸ್ತೆ, ಚಾಮರಾಜಪೇಟೆ, ಗಡಿಯಾರ ಕಂಬ, ವಸಂತ ಟಾಕೀಸ್ ರಸ್ತೆ ಸೇರಿದಂತೆ ನಗರದ ಎಲ್ಲ ಕಡೆಗಳಲ್ಲಿ ಸಂಚರಿಸಿ ತೆರೆದಿದ್ದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.ಇನ್ನೂ ತಹಶೀಲ್ದಾರ್ ಗಿರೀಶ್ ಮತ್ತು ಪೊಲೀಸರನ್ನು ಒಳಗೊಂಡ ತಂಡ ನಗರದ ಹಳೇ ಭಾಗದಲ್ಲಿ ತೆರೆದಿದ್ದ ಹೆಸರಾಂತ ಬಟ್ಟೆ ಅಂಗಡಿಗಳು, ಮಾಲ್‌ಗಳನ್ನು ಮುಚ್ಚಿಸಿದರು. ಈ ಸಂದರ್ಭದಲ್ಲಿ ಲಾಠಿ ಹಿಡಿದಿದ್ದ ತಹಶೀಲ್ದಾರ್ ಗಿರೀಶ್ ಅನಗತ್ಯವಾಗಿ ಓಡಾಡುವವರಿಗೆ, ಮಾಸ್ಕ್ ಧರಿಸದೇ ಇದ್ದವರಿಗೆ ಎಚ್ಚರಿಕೆ ನೀಡಿದರು. ಕ್ಷಣಮಾತ್ರದಲ್ಲಿ ಹಳೆ ದಾವಣಗೆರೆ ಭಾಗದಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆದ ಪರಿಣಾಮ ವಾಹನ ಮತ್ತು ಜನ ಸಂಚಾರ ವಿರಳಗೊಂಡು ಬೀದಿಗಳು ಬಿಕೋ ಎನ್ನತೊಡಿಗಿದವಲ್ಲದೆ, ಕಳೆದ ವರ್ಷದ ಲಾಕ್‌ಡೌನ್ ದಿನಗಳನ್ನು ನೆನಪಿಸಿದವು.ಅಂಗಡಿ ಮುಂಗಟ್ಟು ಬಂದ್ ಆಗಿದ್ದರೂ ಅಲ್ಲಲ್ಲಿ ಜನರ ಸಂಚಾರ ಕಂಡು ಬಂತು. ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ಪೊಲೀಸರು ಎಲ್ಲಿಗೆ ಹೋಗುತ್ತಿದ್ದೀರೆಂದು ವಿಚಾರಿಸಿ, ಸಕಾರಣ ಹೇಳಿದರೆ ಸುಮ್ಮನ್ನೆ ಕಳುಹಿಸುತ್ತಿದ್ದ ಮತ್ತು ಏನೂ ಕಾರಣ ಇಲ್ಲದವರಿಗೆ ಬುದ್ದಿ ಹೇಳಿ ಕಳುಹಿಸುತ್ತಿರುವುದು ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕಂಡು ಬಂತು.