ಕೊರೊನಾ ನಿಯಂತ್ರಣಕ್ಕೆ ಮನೆ ಮದ್ದು ಬಳಸಿ: ಡಾ.ಸಂಕೇಶ್ವರ

ಹುಬ್ಬಳ್ಳಿ,ಏ25: ಕೊರೊನಾ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಸೋಂಕುಳ್ಳವರು ವೈದ್ಯಕೀಯ ಚಿಕಿತ್ಸೆ ಜತೆಗೆ ಮನೆ ಮದ್ದುಗಳನ್ನು ಬಳಸಿದರೆ ಕೊರೊನಾ ನಿಯಂತ್ರಿಸಬಹುದು ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ, ಡಾ. ವಿಜಯ ಸಂಕೇಶ್ವರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿಯಂತ್ರಣವಾಗುತ್ತದೆ. ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿದ್ದೇನೆ ಯಶಸ್ಸು ಕಂಡಿದ್ದೇನೆ. ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ.
ಕೊರೊನಾ ಪಾಸಿಟಿವ್ ಆಗಿರುವವರು ಇದನ್ನು ಪ್ರಯೋಗಿಸಿ ಪರಿಣಾಮ ಕಂಡುಕೊಂಡಿದ್ದಾರೆ ಎಂದರು.
ಎಲ್ಲರೂ ಬಿಸಿ ನೀರು ಸೇವಿಸಬೇಕು. ನಿತ್ಯ ಬಿಸಿ ನೀರಿನ ಹಬೆ (ಸ್ಟೀಮ್) ತೆಗೆದುಕೊಳ್ಳಬೇಕು ಎಂದರು.
ಯಾವಾಗಲೂ ಮಾಸ್ಕ್ ಹಾಕುವುದರಿಂದ ಆಮ್ಲಜನಕ ಸರಿಯಾಗಿ ಸರಬರಾಜು ಆಗುವುದಿಲ್ಲ. ಹಾಗಾಗಿ, ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸಬೇಕು. ಒಬ್ಬರೇ ಇದ್ದಾಗ ಮಾಸ್ಕ್ ಬಳಸಬಾರದು. ಜನರ ಮಧ್ಯೆ ಇದ್ದಾಗ ಮಾತ್ರ ಬಳಸಬೇಕು ಎಂದ ಅವರು, ಡಾ. ಬಿ.ಎಂ. ಹೆಗಡೆ ಅವರು ಹೇಳುವ ಪ್ರಕಾರ ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು. ಮೂಗಿನಲ್ಲಿ ಕೊಬ್ಬರಿ ಎಣ್ಣೆ ಹಾಕಿದರೆ ಕೊರೊನಾ ಮಾತ್ರವಲ್ಲ ಯಾವುದೇ ವೈರಸ್ ತಗುಲುವುದಿಲ್ಲ ಎಂದು ಸಲಹೆ ನೀಡಿದರು.
ನಾನು ಹಾಗೂ ನಮ್ಮ ಮನೆಯವರು ನಿತ್ಯ ಮೂರು ಬಾರಿ ಸ್ಟೀಂ ತೆಗೆದುಕೊಳ್ಳುತ್ತೇವೆ. ನಾನು ನ್ಯಾಚುರೋಪತಿಗೆ ಹೆಚ್ಚು ಒತ್ತು ಕೊಡುತ್ತೇನೆ. 71 ವರ್ಷದ ನಾನು ದೇಶಾದ್ಯಂತ ಓಡಾಡುತ್ತಿರುತ್ತೇನೆ. ನಿತ್ಯ 100ರಿಂದ 500 ಜನರನ್ನು ಭೇಟಿ ಮಾಡುತ್ತಿರುತ್ತೇನೆ. ಆದರೂ ಸೋಂಕು ತಗುಲಿಲ್ಲ. ಕಾರಣ ಮನೆಮದ್ದುಗಳನ್ನು ಬಳಸುತ್ತೇನೆ ಎಂದು ಡಾ. ಸಂಕೇಶ್ವರ ತಿಳಿಸಿದರು.