ಕೊರೊನಾ ನಿಯಂತ್ರಣಕ್ಕೆ ನಾಗರೀಕರ ಸಹಕಾರ ಅಗತ್ಯ

ಹೊಸಕೋಟೆ, ಏ.೨೧-ಕೊರೊನಾ ವೈರಸ್ ಅಕ್ಷರಶಃ ಹೆಮ್ಮಾರಿಯಾಗಿ ಪರಿಣಮಿಸಿದ್ದು ನಿಯಂತ್ರಣಕ್ಕೆ ನಾಗರೀಕರ ಸಹಕಾರ ಅತ್ಯಗತ್ಯ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಸೋಮಶೇಖರ್ ತಿಳಿಸಿದರು.
ನಗರದ ೩೦ನೇ ವಾರ್ಡಿನ ಕಾವೇರಿ ನಗರದಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,.ಪ್ರಸ್ತುತ ಬೆಂಗಳೂರು ನಗರ ಸೇರಿದಂತೆ ದೊಡ್ಡ ದೊಡ್ಡ ಜನಸಂದಣಿ ಇರುವ ಎಂಟು ಜಿಲ್ಲೆಗಳಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಕೈಗೊಂಡರೂ ನಾಗರೀಕರು ಮಾತ್ರ ಸೊಪ್ಪುಹಾಕದೆ ತಮಗೆ ಇಷ್ಟ ಬಂದ ಹಾಗೆ ಸಂಚಾರ ಮಾಡುತ್ತಿದ್ದಾರೆ. ಮೊದಲೆ ಅಲೆಗಿಂತ ಎರಡನೇ ಅಲೆ ಸಾಕಷ್ಟು ತೀವ್ರವಾಗಿದ್ದು, ಸಾವಿನ ಸಂಖ್ಯೆ ಏರುತ್ತಲೆ ಇದೆ. ಆದ್ದರಿಂದ ನಾಗರೀಕರಲ್ಲಿ ನಿರ್ಲಕ್ಷ್ಯ ಮನೋಭಾವ ದೂರವಾಗಿ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಿ. ಸಚಿವ ಎಂಟಿಬಿ ನಾಗರಾಜ್ ಅವರ ಆದೇಶದಂತೆ ನಗರಸಭೆ ವ್ಯಾಪ್ತಿಯ ವಾರ್ಡ್‌ವಾರು ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ನಗರಸಭೆ ಸದಸ್ಯ ಸಿಪಿಎನ್ ನವೀನ್ ಮಾತನಾಡಿ ಮನುಷ್ಯನಲ್ಲಿ ಹಣವಿದ್ದರೂ ಸಹ ಕರೋನಾ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಾಗದೆ ಪರದಾಡುತ್ತಿರುವ ಸನ್ನಿವೇಶ ಎದುರಾಗಿದೆ. ಪರಿಸ್ಥಿತಿ ಅರಿತು ಜೀವನ ಮಾಡುವುದು ನಾಗರೀಕರ ಕೈಯಲ್ಲಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಯಾವುದೇ ಗಾಳಿ ಮಾತಿಗೆ ಬೆಲೆಕೊಡದೆ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿ. ಇದರಿಂದ ದೇಹದ ಆರೋಗ್ಯ ಸುಧಾರಣೆ ಜೊತೆಗೆ ಪಾಸಿಟಿವ್ ಬಂದರೂ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ಶಭಾನ, ಕಾವೇರಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಡಾ.ತಮ್ಮಾರೆಡ್ಡಿ, ಸದಸ್ಯರಾದ ಗಿರಿರಾಜು, ಆಂಜಿನಪ್ಪ ಇದ್ದರು.ಹೊಸಕೋಟೆ ನಗರಸಭೆ ವ್ಯಾಪ್ತಿಯ ಕಾವೇರಿನಗರದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಸೋಮಶೇಖರ್ ಚಾಲನೆ ನೀಡಿದರು.