ಕೊರೊನಾ ನಿಯಂತ್ರಣಕ್ಕೆ ನಕಲಿ ಇಂಜೆಕ್ಷನ್ ಬಳಕೆ: ಎಚ್ ಡಿಕೆ ಆರೋಪ

ಬಸವಕಲ್ಯಾಣ:ಏ.16: ‘ಕೆಲ ಆಸ್ಪತ್ರೆಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ನಕಲಿ ಇಂಜೆಕ್ಷನ್ ನೀಡುತ್ತಿರುವುದು ಗೊತ್ತಾಗಿದೆ. ರೋಗದ ಭಯಾನಕತೆ ತೋರಿಸಿ ಹಣ ಸೆಳೆಯುವ ದಂಧೆ ಆರಂಭ ಆಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಹರಿಹಾಯ್ದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹10 ಸಾವಿರಕ್ಕೊಂದು ಇಂಜೆಕ್ಷನ್ ನೀಡುತ್ತಿರುವ ಬಗ್ಗೆ ಹೇಳಲಾಗುತ್ತಿದೆ. ಮಾತ್ರೆಗಳ ಕೊರತೆಯೂ ಆಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಆಯೋಜಿಸಲು ನಿರ್ಣಯಿಸಿರುವುದು ಉತ್ತಮವೇ. ಆದರೆ, ತಜ್ಞರಿಂದ ಸಲಹೆ ಪಡೆಯುವುದನ್ನು ಬಿಟ್ಟು ನಮ್ಮಂಥ ರಾಜಕಾರಣಿಗಳಿಂದ ಅವರೇನು ಸಲಹೆ ಪಡೆಯುತ್ತಾರೆ’ ಎಂದು ಪ್ರಶ್ನಿಸಿದರು.’ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು. ಕೋವಿಡ್ ನಿಯಮಾವಳಿ ಜಾರಿಗೊಳಿಸಿದ ಬಿಜೆಪಿಯವರೇ ಚುನಾವಣೆಯ ದೊಡ್ಡ ದೊಡ್ಡ ಸಭೆಗಳನ್ನು ಆಯೋಜಿಸಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ಆರೋಪಿಸಿದರು.