‘ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ’

smart

ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು
ಪುತ್ತೂರು, ಎ.೨೯- ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಜನತಾ ಕರ್ಫ್ಯೂ ಸಂದರ್ಭ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ತುರ್ತು ಕ್ರಮಗಳ ಕುರಿತು ಅಧಿಕಾರಿಗಳ ಸಭೆ ಶಾಸಕರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಮುಂದಿನ ಎರಡು ವಾರಗಳ ಕಾಲ ನೂರಕ್ಕೆ ನೂರು ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಗರಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜತೆ ಒಂದಷ್ಟು ಸಂಘರ್ಷಗಳು ಉಂಟಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬೆಳಗ್ಗೆ ೬ ರಿಂದ ೧೦ ಗಂಟೆ ತನಕ ಅಗತ್ಯ ವಸ್ತುಗಳಿಗೆ ಬರುವ ಜನರಲ್ಲಿ ಮಾಹಿತಿ ಪಡೆದು ವಿನಾಯಿತಿ ತೋರಿಸಬೇಕಾಗಿದೆ. ಈ ಕುರಿತು ಅಧಿಕಾರಿಗಳು ಪೊಲೀಸರೊಂದಿಗೆ ಸಂಪರ್ಕದಲ್ಲಿರಬೇಕು. ಅನಗತ್ಯವಾಗಿ ಬರುವವರ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ವ್ಯಾಕ್ಸಿನೇಶನ್‌ಗೆ ಬರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯಗಳಿಂದ, ಹೊರದೇಶಗಳಿಂದ, ರಾಜಧಾನಿ ಬೆಂಗಳೂರಿನಿಂದ ಆಗಮಿಸುವವರ ಕುರಿತು ವಾರ್ಡ್ ಸದಸ್ಯರು, ಆಶಾ ಕಾರ್ಯಕರ್ತೆಯರು ನಿಗಾ ವಹಿಸಬೇಕು. ಹೋಂ ಕ್ವಾರಂಟೈನ್‌ಗೆ ಒಳಪಡುವವರಿಗೆ ಔಷಧಿ, ಆಹಾರ ಸಾಮಾಗ್ರಿಗಳು, ಇನ್ನಿತರ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವಲ್ಲಿ ಸಹಕರಿಸಬೇಕು. ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಕ್ಕೆ ನಿಯಮಿತ ಜನಸಂಖ್ಯೆಗೆ ಅವಕಾಶ ಕಲ್ಪಿಸಬಹುದು ಎಂದು ಶಾಸಕರು ಸೂಚನೆ ನೀಡಿದರು.
ಈ ನಡುವೆ ಡೆಂಗ್ಯೂ ಪ್ರಕರಣ ಜಾಸ್ತಿಯಾಗುತ್ತಿದ್ದು, ರಕ್ತದ ಕೊರತೆ ಉಂಟಾಗಿದೆ. ಆದ್ದರಿಂದ ರಕ್ತದಾನ ಮಾಡುವವರು ಮೊದಲೇ ತಮ್ಮ ಹೆಸರನ್ನು ನೊ೦ಂದಾಯಿಸಿ ರಕ್ತ ನೀಡಬಹುದು. ಪುತ್ತೂರು ನಗರವನ್ನು ಕೇಂದ್ರಿಕೃತವಾಗಿರಿಸಿ ಜನರ ಆರೋಗ್ಯ, ಜೀವರಕ್ಷಣೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನಗರಸಭೆಯ ಮೇಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಮಾತನಾಡಿ, ಸರ್ಕಾರ ಕಠಿಣ ನಿಯಮಾವಳಿಯನ್ನು ವೀಕೆಂಡ್ ಕರ್ಫ್ಯೂ ಬಳಿಕ ಇದೀಗ ೧೪ ದಿನಗಳ ಕಾಲ ವಿಸ್ತರಣೆ ಮಾಡಿದೆ. ೧೦ ಗಂಟೆಯ ನಂತರ ಓಡಾಟಕ್ಕೆ ಅವಕಾಶವಿಲ್ಲ. ಕೇವಲ ಝೀರೋ ಟ್ರಾಫಿಕ್ ಇರಬೇಕು. ಹೊಟೇಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶವಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದರೆ ಡೆಲಿವರಿ ಬಾಯ್ ಮೂಲಕ ಮನೆಗಳಿಗೆ ತಲುಪಿಸಬಹುದು. ಕೃಷಿ ಚಟುವಟಿಕೆಗಳಿಗೆ, ಕಟ್ಟಡ ಕೆಲಸಗಳಿಗೆ ಸಂಘಟಿತ ಕಾರ್ಮಿಕರಿಗೆ ಈಗಾಗಲೇ ನೀಡಲಾಗಿರುವ ಪಾಸ್ ಬಳಸಬಹುದು. ಅಸಂಘಟಿತ ಕಾರ್ಮಿಕರಿದ್ದರೆ ಯಾರು ಕೆಲಸ ವಹಿಸುತ್ತಾರೋ ಅವರು ಕೆಲಸದ ಸ್ಥಳಗಳಿಗೆ ಅವರನ್ನು ಬಿಟ್ಟುವ ಬರುವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಜನತಾ ಕರ್ಫ್ಯೂ ಸಂದರ್ಭದಲ್ಲಿ ನಗರಸಭೆ ವತಿಯಿಂದ ಸೇವಾ ಕಮಿಟಿಯನ್ನು ತೆರೆಯಲಾಗಿದ್ದು, ಪ್ರತಿಯೊಂದಕ್ಕೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು.