ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲ

ಕಲಬುರಗಿ,ನ.18-ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಚಿತ್ತಾಪುರ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕು ಪರೀಕ್ಷೆಗಾಗಿ ನಗರದಲ್ಲಿ ಸ್ಥಾಪಿಸಲಾಗಿರುವ ಎರಡು ಟೆಸ್ಟಿಂಗ್ ಕೇಂದ್ರಗಳಿಂದ ಮಾದರಿ‌ ಪರೀಕ್ಷೆ ವರದಿಗಳು ತಕ್ಷಣಕ್ಕೆ ಲಭ್ಯವಾಗುತ್ತಿಲ್ಲ. ಮಾದರಿ ಪರೀಕ್ಷೆ ವರದಿಗಳು ತಕ್ಷಣಕ್ಕೆ ದೊರೆಯುವಂತೆ ಮಾಡಲು ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಜನರು ಕೊರೋನಾ ಕಡಿಮೆಯಾಗಿದೆ ಎಂದೇ ಭಾವಿಸುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕು ಹರಡುವಿಕೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದರು.
ಯೂರೋಪ್ ರಾಷ್ಟ್ರಗಳಲ್ಲಿ ಎರಡನೆಯ ಹಂತದ ಕೊರೊನಾ ಅಲೆ ಆರಂಭವಾಗಿದೆ. ದಿಲ್ಲಿಯಲ್ಲಿ ಕೂಡಾ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ 2.9% ಇದೆ ಎಂದು ಹೇಳಲಾಗುತ್ತಿದೆ.
ಇಷ್ಟೆಲ್ಲ ಉದಾಹರಣೆ ಇರುವಾಗ ರಾಜ್ಯದಲ್ಲಿ ಕೊರೋನಾ‌ ನಿಯಂತ್ರಣಕ್ಕೆ ಮುಂಜಾಗುರೂಕತೆ ತೆಗೆದೆಕೊಂಡಿಲ್ಲ. ಹೋಂ ಕ್ವಾರಂಟೈನ್ ಬಗ್ಗೆ ಯಾವುದೇ ನಿಯಾಮಾವಳಿಗಳಿಲ್ಲ.
ಸಚಿವರು ಸದನದಲ್ಲಿ ಕೊಡುವ ಉತ್ತರಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ. ಕೇಂದ್ರ ಸರಕಾರ ನೀಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಜಾರಿಗೆ ತರಲಾಗುತ್ತಿದೆ ?, ಕೇಂದ್ರ ಸರಕಾರ ನಿರ್ದೇಶನದ ಪ್ರಕಾರ ಟೆಸ್ಟಿಂಗ್ ಕೇಂದ್ರಗಳನ್ನು ಹೆಚ್ಚು ಮಾಡಬೇಕು. ಆದರೆ ಇಲ್ಲಿ ಎಷ್ಟು ಹೆಚ್ಚುವರಿ ಸ್ಥಾಪಿಸಲಾಗಿದೆ. ಕಲಬುರಗಿಯಲ್ಲಿ ಸಧ್ಯ ಇರುವ ಕೇಂದ್ರಗಳೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಾದರಿ ಸಂಗ್ರಹ ಮಾಡಿದ 24 ಗಂಟೆಯಲ್ಲೇ ವರದಿ ನೀಡಬೇಕು. ಆದರೆ, ಕಲಬುರಗಿ ಯಲ್ಲಿ ದಿನಗಳು ಕಳೆದರೂ ವರದಿ ಬರುತ್ತಿಲ್ಲ. ಸಮುದಾಯ ತಿಳುವಳಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ‌ ಇತ್ಯಾದಿ ಜಾರಿಗೆ ತರಲಾಗಿಲ್ಲ. ಸ್ಥಳೀಯ ಆಡಳಿತ ಈ ಕುರಿತು ಯಾವ ಕ್ರಮ ಕೈಗೊಂಡಿದೆ ? ಎಂದು ಪ್ರಶ್ನಿಸಿದರು.
@12bc = ನೀಲನಕ್ಷೆ ತಯಾರಿಸಲು ಆಗ್ರಹ
ಕಳೆದ ಹತ್ತು ತಿಂಗಳಿಂದ ಕಾಲೇಜುಗಳು ಬಂದ್ ಆಗಿವೆ. ಈಗ ಸರಕಾರ ಪುನಾರಂಭಕ್ಕೆ ತಯಾರಿ ನಡೆಸಿದೆ. ಈ ಕುರಿತು ಒಂದು ಸ್ಪಷ್ಟ ನೀಲ ನಕ್ಷೆ ತಯಾರಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಸರಕಾರದ ವಿದ್ಯಾಗಮ ಕಾರ್ಯಕ್ರಮದಿಂದಾಗಿ ಶಿಕ್ಷಕರಿಗೆ ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ. ಕೆಲ ಶಿಕ್ಷಕರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.‌ ಎಷ್ಟು ಜನಕ್ಕೆ ಪರಿಹಾರ ನೀಡಲಾಗಿದೆ.? ಶಿಕ್ಷಕರನ್ನು ಅಪಾಯದ ಅಂಚಿಗೆ ದೂಡಿ ನೀವು ವಿಧಾನಸೌಧದ ಹವಾನಿಯಂತ್ರಿತ ಕೋಣೆಯಲ್ಲಿ ಇರುವುದು ಯಾವ ನ್ಯಾಯ? ಶಿಕ್ಷಕರನ್ನೇಕೆ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳು ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ತರುವಂತೆ ಹೇಳಲಾಗುತ್ತದೆ. ವಿದ್ಯಾರ್ಥಿಗಳು ಎಷ್ಟು ಸಲ ತರಬೇಕು. ರಜೆಗೆಂದು ಬೇರೆ ಊರಿಗೆ ಹೋದವರು ಎಷ್ಟು ಸಲ ವರದಿ ತರಬೇಕು? ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿಗಳ ಸ್ಥಿತಿ ಹೇಗೆ?, 20 – 25 ಸಾವಿರ ವಿದ್ಯಾರ್ಥಿಗಳು ಹಾಗೂ 5 ಸಾವಿರ ಭೋದಕ ಹಾಗೂ ಇತರೆ ಸಿಬ್ಬಂದಿಗಳು‌ ಮಾದರಿ ಪರೀಕ್ಚೆಗೆ ಎಲ್ಲಿ ಹೋಗಬೇಕು? ಕಲಬುರಗಿ ಜಿಲ್ಲೆಯಲ್ಲಿ ಇರುವ 16 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿಲ್ಲ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇಲ್ಲೇ ಮಾದರಿ ಕೊಡಬೇಕಾಗಿದೆ.ಜಿಲ್ಲೆಯ ಎಲ್ಲ ತಾಲೂಕಿನ‌ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಮ್ಸ್ ಗೆ ಹೋಗಬೇಕು. ಆದರೆ ಚಿಂಚೋಳಿ ಮಾತ್ರ ಇ ಎಸ್ ಐ ಸಿಗೆ ಹೋಗಬೇಕಂತೆ. ಆದೇಕೆ ಚಿಂಚೋಳಿ ತಾಲೂಕಿನವರು ಮಾತ್ರ ಅಲ್ಲಿಗೆ ಹೋಗಬೇಕು? ಯಾಕೆ ಈ ತಾರತಮ್ಯ? ಹಾಗಾಗಿ ರಾಜ್ಯ ಸರಕಾರ ತಕ್ಷಣ ನೀಲನಕ್ಷೆ ಬಿಡುಗಡೆ ಮಾಡಲಿ. ಆಂಧ್ರದಲ್ಲಿ‌ ಈಗಾಗಲೇ 800 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು‌ ವಿದ್ಯಾರ್ಥಿಗಳ ಜೀವದ ಜೊತೆ ಚಲ್ಲಾಟವಾಡದೇ ಸರಕಾರ ಈ ಕುರಿತು ಕ್ರಮಗಳನ್ನು ಕೈಗೊಂಡು ನಿಯಮಾವಳಿಗಳನ್ನು‌ ರೂಪಿಸಬೇಕು ಎಂದು ಆಗ್ರಹಿಸಿದರು..