ಕೊರೊನಾ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ೬೯ ಕೋಟಿ ರೂ. ಆದಾಯ

ದಕ್ಷಿಣ ಕನ್ನಡ,ಏ.೧೮-ಪ್ರಸಿದ್ಧ ನಾಗಾರಾಧನೆಯ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಪ್ರಸಕ್ತ ೨೦೨೦-೨೧ನೇ ಸಾಲಿನ ಆರ್ಥಿಕ ವರ್ಷದಲ್ಲಿ ೬೮,೯೪,೮೮,೦೩೯.೧೭ ರೂ ಆದಾಯ ಗಳಿಸಿದೆ. ಕಳೆದ ೨೦೨೦ ಏಪ್ರಿಲ್‌ನಿಂದ ೨೦೨೧ ಮಾರ್ಚ್ ೩೧ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ.
ಕಳೆದ ವರ್ಷ ಮಾ.೧೭ರಿಂದ ಸೆ.೮ ರ ತನಕ ಶ್ರೀ ದೇವಳವು ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿತ್ತು. ಹಾಗಾಗಿ ಈ ೬ ತಿಂಗಳ ಅವಧಿಯಲ್ಲಿ ಶ್ರೀ ದೇವಳಕ್ಕೆ ಯಾವುದೇ ಆದಾಯ ಇರಲಿಲ್ಲ. ಬಳಿಕ ಸೆ.೧೫ ರಿಂದ ಮಾ.೩೧ರ ತನಕ ಶ್ರೀ ದೇವಳಕ್ಕೆ ಬಂದ ಆದಾಯ ಇದಾಗಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ೨೦೧೯-೨೦ನೇ ಆರ್ಥಿಕ ವರ್ಷದಲ್ಲಿ ಶ್ರೀ ದೇವಳವು ೯೮,೯೨,೨೪,೧೯೩.೩೪ ರೂ. ಆದಾಯ ಗಳಿಸಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿ ಶ್ರೀ ದೇವಳವು ಬಂದ್ ಆದ ಕಾರಣ ಶ್ರೀ ದೇವಳವು ಕಳೆದ ವರ್ಷಕ್ಕಿಂತ ಈ ಬಾರಿ ೨೯,೯೭,೩೬,೧೫೪.೧೭ ರೂ ಕಡಿಮೆ ಆದಾಯ ಗಳಿಸಿದೆ ಎಂದರು.
ಇನ್ನು, ಗುತ್ತಿಗೆಗಳಿಂದ ೭೨,೩೫,೩೩೧ ರೂ, ತೋಟದ ಉತ್ಪನ್ನದಿಂದ ೧೫,೬೪,೬೮೧ರೂ, ಕಟ್ಟಡ ಬಾಡಿಗೆಯಿಂದ ೩೭,೧೧,೪೦೯ರೂ, ಕಾಣಿಕೆಯಿಂದ ೩,೩೪,೬೯,೭೧೭ರೂ, ಕಾಣಿಕೆ ಹುಂಡಿಯಿಂದ ೧೨,೭೫,೧೧,೩೦೧ರೂ, ಹರಿಕೆ ಸೇವೆಗಳಿಂದ ೨೪,೧೦,೬೩,೪೦೧ರೂ, ಅನುದಾನದಿಂದ ರೂ.೮೦,೧೯೬, ಹೂಡಿಕೆಯಿಂದ ಬಂದ ಬಡ್ಡಿ ೨೦,೪೯,೦೦,೪೨೪, ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ ೩೬,೭೨,೬೪೫, ಸಂಕೀರ್ಣ ಜಮೆಗಳಿಂದ ೨,೬೩,೦೭,೧೩೯ ರೂ, ಅನ್ನಸಂತರ್ಪಣೆ ನಿಧಿಯಿಂದ ರೂ.೩,೫೪,೬೧,೯೮೨, ಅಭಿವೃದ್ದಿ ನಿಧಿ ೯,೨೦,೯೦೮ ರೂ, ಶಾಶ್ವತ ಸೇವಾ ಮೂಲಧನ ರೂ.೩೫,೮೮,೯೦೦ ಹೀಗೆ ಒಟ್ಟು ೬೮ಕೋ.೯೪ ಲಕ್ಷದ ೮೮ ಸಾವಿರದ ೦೩೯.೧೭ ಆದಾಯ ಶ್ರೀ ದೇವಳಕ್ಕೆ ಬಂದಿದೆ.
ಕೊರೊನಾದ ನಿಯಮ ಸಡಿಲಿಕೆ ಬಳಿಕ ಸೆ.೧೪ ರಿಂದ ದೇವಳದಲ್ಲಿ ಕೆಲವೊಂದು ಸೇವೆಗಳಿಗೆ ಮಿತಿಯನ್ನು ನಿಗದಿಪಡಿಸಿ ನಂತರ ಹಂತ ಹಂತವಾಗಿ ಸೇವೆ ಮಿತಿಗಳನ್ನು ಹೆಚ್ಚುವರಿ ಮಾಡಿಕೊಂಡು ಭಕ್ತರಿಗೆ ಸೇವೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ೨೦೨೧ ರ ಜನವರಿ ನಂತರ ಈ ಹಿಂದಿನಂತೆ ಸೇವೆ ನೆರವೇರಿಸಲು ಅವಕಾಶ ನೀಡಲಾಗಿತ್ತು.
ಆದರೆ ಮಾಚ್-೨೦೨೦ ರಿಂದ ಸೆಪ್ಟೆಂಬರ್-೨೦೨೦ ರ ವರೆಗೂ ಅಂದರೆ ಸುಮಾರು ೬ ತಿಂಗಳುಗಳಿಗಿಂತಲೂ ಅಧಿಕ ದೇಶಾದ್ಯಂತ ಉಲ್ಭಣಿಸಿದ ಈ ವಿಷಮ ಪರಿಸ್ಥಿತಿಯಿಂದಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ತೀರಾ ಇಳಿಮುಖವಾಗಿ ಶ್ರೀ ದೇವಳದ ಆದಾಯದಲ್ಲೂ ಭಾರಿ ಮೊತ್ತದ ಇಳಿಕೆಯಾಗಿರುತ್ತದೆ ಎಂದು ಮೋಹನರಾಂ ಸುಳ್ಳಿ ಹೇಳಿದ್ದಾರೆ
ನಿತ್ಯವೂ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು ೧೮೦ ಕೋಟಿ ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯ ಹಲವಾರು ಕಾಮಗಾರಿಗಳು ನಡೆಯುತ್ತಿದೆ. ಸಾರ್ವಜನಿಕ ಭಕ್ತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ, ಶ್ರೀ ಕ್ಷೇತ್ರದಲ್ಲಿ ಸಾಕಷ್ಟು ವಸತಿಗೃಹಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಸಮಗ್ರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಸ್ತೆಗಳ ಅಗಲೀಕರಣವೇ ಮುಂತಾದ ಮಾಸ್ಟರ್ ಪ್ಲಾನ್ ಯೋಜನೆಯ ಕಾಮಗಾರಿಗಳನ್ನು ನಡೆಸುತ್ತಾ ಬರುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಲಿಸುವಲ್ಲಿ ಸರಕಾರ, ಇಲಾಖೆ ಮತ್ತು ದೇವಳದ ಆಡಳಿತ ಶ್ರಮಿಸುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.