‘ಕೊರೊನಾ ನಡುವೆಯೂ ಕೃಷಿ ಚಟುವಟಿಕೆ ಜೋರು..!’ ಮುಂಗಾರು ಹಂಗಾಮಿಗೆ ಭರದ ಸಿದ್ದತೆ

ಶಿವಮೊಗ್ಗ, ಮೇ 26: ‘ಲೋಕದೊಳೇನೆ ನಡೆಯುತಲಿರಲಿ ತನ್ನಿ ಕಾಯರ್ಾವ ಬಿಡನೆಂದು,
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು…’ ಅನ್ನದಾತ ರೈತರ
ಕೃಷಿ ಚಟುವಟಿಕೆಯ ಬಗ್ಗೆ ರಾಷ್ಟ್ರಕವಿ ಕುವೆಂಪುರವರು ಬರೆದ ಈ ಸಾಲುಗಳು, ಕೊರೊನಾ
ಸಂಕಟದಲ್ಲಿ ಅಕ್ಷರಶಃ ಸತ್ಯವಾಗಿದೆ! ಪ್ರಸ್ತುತ ಕೊರೊನಾ ವೈರಸ್, ಇಡೀ ವಿಶ್ವ ಮನುಜ ಸಂಕುಲದ ನಿದ್ದೆಗೆಡಿಸಿದೆ. ದೇಶದ
ಗ್ರಾಮೀಣ ಭಾಗಗಳಲ್ಲಿಯೂ ಸೋಂಕು ಉಲ್ಬಣಿಸುತ್ತಿದೆ. ಸಾವು-ನೋವುಗಳು ವರದಿಯಾಗುತ್ತಿವೆ.
ಇಂತಹ ಸಂದಿಗ್ದ-ವಿಷಮ ಸ್ಥಿತಿಯಲ್ಲಿಯೂ ರೈತ ಸಮೂಹ ಕೃಷಿ ಚುಟವಟಿಕೆಯಿಂದ ದೂರ
ಉಳಿದಿಲ್ಲ. ಬಿತ್ತುಳುವುದ ಬಿಟ್ಟಿಲ್ಲ!

ಹೌದು. ಸುಡು ಬಿಸಿಲು ಬೀಳುವ ಮೇ ತಿಂಗಳಲ್ಲಿಯೇ, ವಾಯುಭಾರ ಕುಸಿತ-ಚಂಡಮಾರುತ ಮತ್ತೀತರ
ಹವಮಾನ ವೈಪರೀತ್ಯದಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ
ಹದ ಮಳೆಯಾಗಿದೆ. ಇದು ಕೃಷಿ ಚಟುವಟಿಕೆ ಕಾರ್ಯ ಬಿರುಸುಗೊಳ್ಳುವಂತೆ ಮಾಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಕಾರ್ಯ ಆರಂಭಗೊಂಡಿದೆ.
ಬಿತ್ತನೆ ಹಾಗೂ ನಾಟಿಗೆ ಕೃಷಿ ಭೂಮಿಯನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ರೈತ ಸಮೂಹ
ತಲ್ಲೀನವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಕೃಷಿ ಪರಿಕರಗಳ ಖರೀದಿಗೆ
ಮುಂದಾಗಿದ್ದಾರೆ. ಆದರೆ ಲಾಕ್’ಡೌನ್ ನಿಂದ ಖರೀದಿ ಪ್ರಕ್ರಿಯೆಗೆ ಸಾಕಷ್ಟು ಅಡೆತಡೆ
ಉಂಟಾಗಿದೆ.

‘ಉತ್ತಮ ಮಳೆಯಾದ ಕಾರಣದಿಂದ, ಕಳೆದ ಕೆಲ ದಿನಗಳ ಹಿಂದೆಯೇ ಮೆಕ್ಕೆಜೋಳ ಬಿತ್ತನೆ
ಮಾಡಿದ್ದೆನೆ. ಆದರೆ ಲಾಕ್ಡೌನ್ ಕಾರಣದಿಂದ ಬಿತ್ತನೆ ಬೀಜ, ರಸಗೊಬ್ಬರ ಮತ್ತೀತರ
ಪರಿಕರಗಳನ್ನು ತರುವುದು ಕಷ್ಟಮಯವಾಗಿದೆ. ಉಳಿದಂತೆ ಕೊರೊನಾದ ಭಯವಿದೆ. ಇದು
ಗದ್ದೆಯಲ್ಲಿ ಕೆಲಸ ಮಾಡಲು ಅಡ್ಡಿಯಾಗಿಲ್ಲ’ ಎಂದು ಶಿವಮೊಗ್ಗ ತಾಲೂಕಿನ ಬಸವನಗಂಗೂರು
ಗ್ರಾಮದ ಯುವ ರೈತ ಪ್ರಶಾಂತ್ ಎಂಬುವರು ಹೇಳುತ್ತಾರೆ.