ಕೊರೊನಾ ತಡೆ: ಸಹಕಾರಕ್ಕೆ ಸಿಎಂ ಮನವಿ

Mini Vidhasoudha inauguration

ತುಮಕೂರು/ತಿಪಟೂರು, ಮಾ. ೨೦- ಕೊರೊನಾ ಸೋಂಕು ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೋವಿಡ್ ತಡೆಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದರು.
ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಗಳಿಗೆ ಷರತ್ತು ಹಾಕಲಾಗಿದೆ. ಆದರೆ ಸಾರ್ವಜನಿಕ ಸಭೆಗಳಿಗೆ .ಯಾವುದೇ ನಿಬಂಧನೆ ಹಾಕಿಲ್ಲ. ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.
ತಿಪಟೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧ, ನಗರಸಭೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಉದ್ಧಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಯೋಚನೆ ಇಲ್ಲ. ಮುಂದಿನ ಒಂದು ವಾರಗಳ ಕಾಲ ಕೊರೊನಾ ಸೋಂಕಿನ ಪ್ರಮಾಣ ಸುಧಾರಿಸದೇ ಇದ್ದರೆ, ಕೋವಿಡ್ ಸಂಖ್ಯೆ ಜಾಸ್ತಿಯಾಗುತ್ತಿದ್ದರೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು ಎಂದರು.
ಕೋವಿಡ್ ಹೆಸರಿನಲ್ಲಿ ಹಣ ದುರುಪಯೋಗವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಮಂಡಲದಲ್ಲಿ ಕೋವಿಡ್ ಖರ್ಚಿನ ಮಾಹಿತಿಯನ್ನು ನೀಡುತ್ತೇನೆ ಎಂದರು.
ಬಾಯಿ ಮಾತಲ್ಲಿ ಹಣ ದುರುಪಯೋಗವಾಗಿದೆ ಎಂದು ಹೇಳುವುದು ಸುಲಭ. ಸಾಕ್ಷ್ಯಾಧಾರ ಇಲ್ಲದೆ ಈ ರೀತಿಯ ಆರೋಪ ಮಾಡುವುದು ವಿರೋಧ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ ಎಂದರು.
ಹಣಕಾಸಿನ ಸುಧಾರಣೆಯನ್ನು ನೋಡಿಕೊಂಡು ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜತೆಗೆ ನೀರಾವರಿ ಯೋಜನೆಗೂ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಬಿ.ಸಿ. ನಾಗೇಶ್, ಮಸಾಲ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.

ತಿಪಟೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಬಿ.ಸಿ. ನಾಗೇಶ್, ಮಸಾಲ ಜಯರಾಮ್ ಮತ್ತಿತರರು ಇದ್ದಾರೆ.