ಕೊರೊನಾ ತಡೆ ಲಸಿಕೆ ಎಲ್ಲರಿಗೂ ವಿಸ್ತರಿಸಲು ಮನವಿ

ಹರಪನಹಳ್ಳಿ ಮಾ 22 : ಕೊರೊನಾ ಲಸಿಕೆ ಹಿರಿಯರಿಗೆ ಸೀಮಿತಗೊಳಿಸದೇ ಎಲ್ಲರಿಗೂ ವಿಸ್ತರಿಸಿದರೆ ಕೊರೊನಾ ತಡೆಯುವುದು ಸುಲಭವಾಗುತ್ತದೆ ಎಂದು ಕೆಪಿಸಿಸಿ ವೈದ್ಯಕೀಯ ರಾಜ್ಯ ಘಟಕದ ಅಧ್ಯಕ್ಷ ಡಾ.ಮಧುಸೂದನ್ ಹೇಳಿದರು.
ತಾಲ್ಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್, ತಥಾಗತ್ ಹೃದ್ರೋಗ ಆಸ್ಪತ್ರೆ ಮತ್ತು ಭಾರತೀಯ ಹೃದ್ರೋಗ ಸಂಸ್ಥೆ, ಬೆಂಗಳೂರು ಕೆಪಿಸಿಸಿ ವೈದ್ಯಕೀಯ ಘಟಕ, ದಾವಣಗೆರೆ ಎಸ್.ಎಸ್. ಆಸ್ಪತ್ರೆ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಹಣಕ್ಕಿಂತ ಆರೋಗ್ಯವೇ ಮುಖ್ಯ ಎನ್ನುವುದನ್ನು ಕೊರೊನಾ ವರ್ಷ ಪಾಠ ಕಲಿಸಿದೆ ಎಂದು ಹೇಳಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಸಮಾಜಸೇವೆಗೆ ಅಧಿಕಾರವೇ ಬೇಕಿಲ್ಲ. ಮದರ್ ಥೆರೆಸಾ, ಸಾಲುಮರದ ತಿಮ್ಮಕ್ಕನಂತಹವರಿಗೆ ಅಧಿಕಾರವೆ ಇರಲಿಲ್ಲ. ದಿ.ಎಂ.ಪಿ. ಪ್ರಕಾಶ್ ನಡೆದ ಹಾದಿಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷ ಡಾ.ಮಹಾಂತೇಶ್ ಯುವಕರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಾಗುತ್ತಿದೆ. ಶೇ 30ರಷ್ಟು ಮಂದಿ ಸಕ್ಕರೆ ಕಾಯಿಲೆ, ಶೇ 20ರಷ್ಟು ಜನ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದರು.
ವಿವಿಧ ಹಳ್ಳಿಗಳಿಂದ ಬಂದ 800ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಡಾ.ಭಗತ್ ರಾಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಶ್ರೀನಿವಾಸನ್, ಡಾ.ರೂಪೇಶ್, ಡಾ.ವಿಕ್ರಮ್, ನಿವೃತ್ತ ಸೈನಿಕ ಆನಂದರಾವ್, ಡಾ.ಪ್ರಭುದೇವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರಗೌಡ, ಉಪಾಧ್ಯಕ್ಷ ಟಾಕ್ರಾನಾಯ್ಕ, ಸದಸ್ಯರಾದ ಕರಿಬಸಪ್ಪ, ಹನುಮಂತನಾಯ್ಕ, ಉಷಾ, ವೆಂಕಟೇಶ್, ಮಂಜಪ್ಪ, ಶಂಕರನಾಯ್ಕ, ಸೋಮಪ್ಪ, ಚಂದ್ರಪ್ಪ, ಕವಿತಾ, ಗಾಯಿತ್ರಿ, ಮನೋಜ್ ಶಿಬಿರದಲ್ಲಿದ್ದರು.