ಕೊರೊನಾ ತಡೆಯುವಲ್ಲಿ ಸರ್ಕಾರ ವಿಫಲ : ರಾಯರೆಡ್ಡಿ

ಹುಬ್ಬಳ್ಳಿ ಏ 30 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕೊರೊನಾ ಈ ಬಾರಿ ನಮ್ಮ ದೇಶದಲ್ಲೇ ಹೆಚ್ಚು ಹಬ್ಬಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರಧಾನಮಂತ್ರಿ ತುಂಬಾ ಹೆಮ್ಮೆಯಿಂದ ಹೇಳಿದ್ರು. ನಾವು ಕೊರೊನಾ ನಿಯಂತ್ರಣ ಮಾಡಿದ್ದೇವೆ.
ವಿಶ್ವದಲ್ಲೇ ನಾನೇ ದೊಡ್ಡ ನಾಯಕ ಎನ್ನುತ್ತಾರೆ.ಕೇಂದ್ರ ಸರ್ಕಾರದ ಅಹಂಕಾರ ಮತ್ತು ದೂರದೃಷ್ಟಿ ಇಲ್ಲದ ಕಾರಣ ಸೋಂಕು ಬೆಳೆಯುತ್ತಿದೆ.
ಭಾರತಕ್ಕೆ ಲಸಿಕೆ ಮತ್ತು ಕಿಟ್ ಗಳನ್ನ ಬೇರೆ ದೇಶದವರು ನೀಡುತ್ತಿದ್ದಾರೆ. ಆದ್ರೆ ನಮಗೆ ಅದು ಬೇಡ ಎಂದು ಹೇಳಿ ಕೇಂದ್ರ ಸರ್ಕಾರ ದುರಂಹಾರ ಮಾಡುತ್ತಿದೆ. ಇದು ಅವರ ಅಹಂಕಾರ, ದೂರ ದೃಷ್ಟಿ ಇಲ್ಲ ಎನ್ನುವದನ್ನು ತೋರಿಸುತ್ತಿದೆ ಎಂದರು.

ಡಾಕ್ಟರ್ ಮತ್ತು ನರ್ಸ್ ಗಳ ಕೊರತೆ ಹೆಚ್ಚಿದೆಮುಂದೆ 3 ನೆಯ ಅಲೆ ಬಂದರೆ 10 ಲಕ್ಷ ಜನ ಸೋಂಕಿತರಾಗುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅದನ್ನು ಬಿಟ್ಟು ರಾಮನ ಮೂರ್ತಿ, ವಲ್ಲಭಾಯಿ ಪಟೇಲ್ ಮೂರ್ತಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೇ ಅದೇ ಹಣವನ್ನ ಇಲ್ಲಿ ವ್ಯಯಿಸಿದ್ದರೇ ಕೊರೊನಾ ನಿಯಂತ್ರಿಸಬಹುದಿತ್ತು ಎಂದು ಕುಟುಕಿದರು.

ಕೋರ್ಟ್ ಗಳು ಸಹ ಕೇಂದ್ರ ಸರ್ಕಾರಕ್ಕೆ ನೀವು ವಿಫಲರಾಗಿದ್ದೀರಿ ಎಂದು ಎಚ್ಚರಿಸಿವೆ. ಸುಪ್ರೀಂ ಕೋರ್ಟ್ ಸಹ ಕೊರೊನಾ ನಿಯಂತ್ರಣಕ್ಕೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರ ಕೊರೊನಾ ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಸಚಿವ ಮಂಡಲ ಕೊರೊನಾ ಎದುರಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರಕ್ಕೆ ಮಾತ್ರ ಕೊರೊನಾವನ್ನ ಬಳಸಿಕೊಂಡಿದ್ದಾರೆ.ಆರೋಗ್ಯ ದೃಷ್ಟಿಯಿಂದ ಯಾವುದೇ ವಿಚಾರ ಮಾಡಿಲ್ಲ ಎಂದು ಕಿಡಿಕಾರಿದರು.

ಸುಧಾಕರ್ ಅವರು ಮುಖ್ಯಮಂತ್ರಿಗೆ ಭ್ರಷ್ಟಾಚಾರದಲ್ಲಿ ಸಹಾಯ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮಂತ್ರಿ ಸ್ಥಾನ ನೀಡಿದ್ದಾರೆ. ಅವರು ಇದ್ರೆ ಭ್ರಷ್ಟಾಚಾರ ಮಾಡಲು ಅನುಕೂಲವಾಗೋಲ್ಲ ಅಂತ ರಾಮುಲು ಅವರನ್ನ ಕೆಳಗಿಳಿಸಿ ಸುಧಾಕರ್ ಗೆ ಸ್ಥಾನ ನೀಡಿದ್ದಾರೆ.ಸುಧಾಕರ್ ಎಂದು ಡಾಕ್ಟರ್ ವೃತ್ತಿ ಮಾಡಿಲ್ಲ, ಕೇವಲ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದವರು.ಮಂತ್ರಿ ಮಾಡಿದ್ದು ಭ್ರಷ್ಟಾಚಾರ ಮಾಡಲು ಮಾತ್ರ ಸಿಎಂ ಇವರಿಗೆ ಸ್ಥಾನ ನೀಡಿದ್ದಾರೆ. ಕೊರೊನಾ ಕಿಟ್ ಖರೀದಿಯಲ್ಲಿ 2200ಕೋಟಿ ಭ್ರಷ್ಟಾಚಾರ ಆಗಿದೆ,ಅದು ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಉಮೇಶ್ ಕತ್ತಿಯವರಿಗೆ ಮಾನವೀಯತೆ ಇಲ್ಲ.ಮಿನಿಸ್ಟರ್ ಆಗಲು ಅವರಿಗೆ ಯೋಗ್ಯತೆ ಇಲ್ಲ. ಕೊರೊನಾ ಬಗ್ಗೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಪಳಗಿದ ವ್ಯಕ್ತಿಯನ್ನು ಮಿನಿಸ್ಟರ್ ಮಾಡಿ. ಏನು ಗೊತ್ತಿಲ್ಲದವರನ್ನ ತಂದು ಕೂರಿಸಿದರೆ ಈ ರೀತಿಯಾಗುತ್ತೆ.ಸುಧಾಕರ್ ಒಬ್ಬ ನಾಮಕಾವಸ್ಥೆ ಡಾಕ್ಟರ್. ಅವರು ಯಾವತ್ತೂ ಸಹ ಪ್ರ್ಯಾಕ್ಟೀಸ್ ಮಾಡಿಲ್ಲ. ಕೊರೊನಾ ಬಲ್ಲ ವೈದ್ಯರನ್ನ ಮಾತ್ರ ಮಿನಿಸ್ಟರ್ ಮಾಡಿ. ಭ್ರಷ್ಟಾಚಾರ ಮಾಡಬಲ್ಲ ಎಕ್ಪರ್ಟ್ ಗಳನ್ನ ಮಿನಿಸ್ಟರ್ ಮಾಡಬೇಡಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಿಲಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ ಉಪಸ್ಥಿತರಿದ್ದರು.