ಕೊರೊನಾ ತಡೆಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು,ಏ.೨೯- ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಿರುವ ಜನತಾ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಯಾರೇ ಆಗಲಿ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡಿದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೊರೊನಾ ತಡೆಗೆ ಸರ್ಕಾರ ಜಾರಿ ಮಾಡಿರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿ. ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಜನ ಮಾಸ್ಕ್ ಧರಿಸಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಬಗ್ಗೆಯೂ ಜಿಲ್ಲಾಡಳಿತ, ಪೊಲೀಸರು ನಿಗಾ ವಹಿಸಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಅವರು ಸೂಚಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣ ಮತ್ತು ಜಿಲ್ಲೆಗಳಲ್ಲಿರುವ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಿಂದ ಎಲ್ಲ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಶಸ್ತ್ರ ತಜ್ಞರು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ವೀಡಿಯೊ ಸಂವಾದ ನಡೆಸಿ ಕೋವಿಡ್ ನಿಯಂತ್ರಣ ಸಂಬಂಧ ಸಲಹೆ-ಸೂಚನೆಗಳನ್ನು ನೀಡಿದರು.
ಪ್ರತಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೆಮಿಡಿಸಿವಿಯರ್ ಔಷಧಿ ಕೊರತೆಯಾಗದಂತೆ ಗಮನ ನೀಡಲಾಗಿದೆಯೇ? ಸೋಂಕಿತರ ಚಿಕಿತ್ಸೆಗೆ ಮಾಡಿರುವ ವ್ಯವಸ್ಥೆ ಮತ್ತಿತ್ತರ ವಿಚಾರಗಳ ಬಗ್ಗೆಯೂ ಮುಖ್ಯಮಂತ್ರಿಗಳು ಇಂದು ಪ್ರತಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸೋಂಕಿತರ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.
ಆಮ್ಲಜನಕ, ಔಷಧಿ ಕೊರತೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ರಾಜ್ಯಾದ್ಯಂತ ಜಾರಿ ಮಾಡಿರುವ ಜನತಾ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಜನರು ಅನಗತ್ಯ ಓಡಾಡದಂತೆ ಕ್ರಮಕೈಗೊಳ್ಳಿ. ಹಾಗೆಯೇ ಜಾತ್ರೆ ಸೇರಿದಂತೆ ಹಳ್ಳಿಗಳಲ್ಲಿ ಯಾವುದೇ ರೀತಿಯ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಜರುಗದಂತೆ ಕಟ್ಟೆಚ್ಚರ ವಹಿಸುವಂತೆಯೂ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೆಲ ಹಳ್ಳಿಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಪಾಲ್ಗೊಳ್ಳುತ್ತಿರುವ ಮಾಹಿತಿ ಇದೆ. ಈ ಬಗ್ಗೆ ಗಮನ ನೀಡಿ ಮಾರ್ಗಸೂಚಿಗಳು ಪಾಲನೆಯಾಗುವಂತೆ ನೋಡಿಕೊಳ್ಳಿ ಎಂದು ಸಲಹೆ ಮಾಡಿದರು.
ಕೊರೊನಾ ತಡೆಗೆ ಲಸಿಕೆ ಮದ್ದು, ಹಾಗಾಗಿ, ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಚುರುಕುಗೊಳಿಸಿ ಎಂದ ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯಲ್ಲೂ ಲಸಿಕೆ ನೀಡಿಕೆಯ ಪ್ರಗತಿಯ ಮಾಹಿತಿಯನ್ನು ಪಡೆದುಕೊಂಡರು.
ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕೂ ಸೂಕ್ತ ಕ್ರಮ ಕೈಗೊಳ್ಳಿ. ಆದಷ್ಟು ಎಲ್ಲರಿಗೂ ಲಸಿಕೆ ನೀಡುವ ಕೆಲಸ ಬೇಗ ಆಗಬೇಕು. ಇದರಿಂದ ಕೊರೊನಾ ತಡೆ ಸಾಧ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.
ಇಂದಿನ ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಡಾ. ಕೆ. ಸುಧಾಕರ್, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವರು ಅಧಿಕಾರಿಗಣ ಸಭೆ
ಇದಕ್ಕೂ ಮೊದಲು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಗಳು ಸಚಿವರು ಹಾಗೂ ಅಧಿಕಾರಿಗಳ ಜತೆ ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಸೋಂಕು ನಿಯಂತ್ರಣ ಕ್ರಮಗಳು, ಸೋಂಕಿತರಿಗೆ ಚಿಕಿತ್ಸೆ, ಆಕ್ಸಿಜನ್, ಐಸಿಯು, ಹಾಸಿಗೆಗಳು ಹಾಗೂ ಔಷಧಿಗಳ ಬಗ್ಗೆ ಮಾಹಿತಿ ಪಡೆದು ಲಸಿಕೆ ವಿತರಣೆ ಬಗ್ಗೆಯೂ ಚರ್ಚೆ ನಡೆಸಿ ಅಗತ್ಯ ಸೂಚನೆ ನೀಡಿದರು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.