ಕೊರೊನಾ ತಡೆಗೆ ಸಂಜೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು,ಏ. ೨೦- ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ಇಂದು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತಿದೆ. ಸೋಂಕು ಹೆಚ್ಚಿರುವ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿಗಳು ಮತ್ತು ಉಳಿದ ಜಿಲ್ಲೆಗಳಿಗೆ ಬೇರೆ ರೀತಿಯ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಮುಖಂಡರ ಸಭೆ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರಿಗೆ ಪ್ರತ್ಯೇಕ ನಿಯಮ ಜಾರಿ ಮಾಡುತ್ತೇವೆ. ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.
ವಿರೋಧ ಪಕ್ಷಗಳು ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕು. ಆರೋಪ, ಪ್ರತ್ಯಾರೋಪ ಮಾಡುವುದನ್ನು ಕೈಬಿಡಬೇಕು ಎಂದರು.
ಕೊರೊನಾ ಸೋಂಕಿನ ವಸ್ತುಸ್ಥಿತಿಯನ್ನು ನಿನ್ನೆಯ ಸಭೆಯಲ್ಲಿ ಶಾಸಕರ ಮುಂದಿಡಲಾಗಿದೆ. ಸತ್ಯ ಹೇಳುವುದೇ ತಪ್ಪೆ ಎಂದ ಅವರು, ಭಾರತ ಸೇರಿದಂತೆ ಮುಂದುವರೆದ ಹಲವು ದೇಶಗಳಲ್ಲಿ ಕೊರೊನಾದಿಂದ ಹೆಚ್ಚು ಸಾವುಗಳಾಗಿವೆ. ಇದಕ್ಕೆ ಸರ್ಕಾರ ವಿಫಲ ಎಂದು ಹೇಳಲು ಸಾಧ್ಯವಿಲ್ಲ. ಇದು ಸಾಂಕ್ರಾಮಿಕ ರೋಗ. ಎಲ್ಲರೂ ಒಗ್ಗೂಡಿ ಪರಿಶ್ರಮ ಹಾಕಿ ಸೋಂಕು ತಡೆಯಬೇಕು ಎಂದರು.
ಸದ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಸಾಲುವುದಿಲ್ಲ ಎಂಬುದು ನಾನು ಒಪ್ಪುತ್ತೇನೆ. ಆದರೆ ರಾತ್ರೋರಾತ್ರಿ ವೈದ್ಯರನ್ನು ಆರೋಗ್ಯ ಕಾರ್ಯಕರ್ತರನ್ನು ಸೃಷಿಸಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಜನ ಹೆಚ್ಚು ಗುಂಪುಗೂಡುತ್ತಿರುವುದರಿಂದ ಸೋಂಕು ಹೆಚ್ಚಳವಾಗುತ್ತಿದೆ. ಜನರ ಗುಂಪಿನಿಂದಲೇ ಕೋವಿಡ್ ಸೋಂಕು ಹರಡುತ್ತಿದೆ ಎಂದರು.
ಜನ ಕೋವಿಡ್ ನಿಯಮಗಳನ್ನು ಪಾಲಿಸಿದರೆ ಲಾಕ್‌ಡೌನ್, ಸೀಲ್‌ಡೌನ್‌ಗಳ ಅಗತ್ಯವೇ ಬೀಳುವುದಿಲ್ಲ ಎಂದರು.
ಸದ್ಯ ನಾವು ಸಂದಿಗ್ದ ಪರಿಸ್ಥಿತಿಯಲ್ಲಿದ್ದೇವೆ. ಇದು ಯುದ್ಧದ ಸಮಯ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಪ್ರತಿಷ್ಠೆ ತೋರಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇವೆ. ಜನರ ಜೀವ ಉಳಿಸುವ ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ಸಚಿವ ಸುಧಾಕರ್ ಹೇಳಿದರು.
ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಯಮಗಳ ಅಗತ್ಯವಿದೆ. ರಾಜ್ಯಪಾಲರ ಸಭೆಯ ನಂತರ ಕಠಿಣ ನಿಯಮಗಳು ಜಾರಿಯಾಗುವ ಸುಳಿವನ್ನು ಅವರು ನೀಡಿದರು.